Advertisement

ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿ: ಡಿಸಿ ಸೂಚನೆ

03:12 PM Aug 17, 2017 | Girisha |

ಶಿವಮೊಗ್ಗ: ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾರ್ಥಿ ಹಾಸ್ಟೆಲ್‌ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಎಂ. ಲೋಕೇಶ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವಿವಿಧ ಕಾಮಗಾರಿಗಳ ಅನುಷ್ಠಾನ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಲವು ಹಾಸ್ಟೆಲ್‌ಗ‌ಳು ನಿರ್ಮಾಣಗೊಂಡ ಒಂದೆರಡು ವರ್ಷಗಳಲ್ಲಿ ಸೋರುತ್ತಿವೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿರುವುದು ಇದಕ್ಕೆ ಕಾರಣ. ಇದೇ ರೀತಿ ದುರಸ್ತಿಯಲ್ಲಿ ಸಹ ಗುಣಮಟ್ಟ ಕಾಪಾಡಬೇಕು ಎಂದು ಸೂಚನೆ ನೀಡಿದರು. ನಿರ್ಮಾಣ ಇಲಾಖೆ ಹಾಗೂ ಸಂಸ್ಥೆಗಳಾದ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ, ನಿರ್ಮಿತಿ ಕೇಂದ್ರ, ಕೆಆರ್‌ಐಡಿಎಲ್‌ ಮತ್ತು ನಿರ್ಮಿತಿ ಕೇಂದ್ರಗಳು ಕೈಗೊಂಡಿರುವ ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಕಾಮಗಾರಿಗಳ ಸಮಗ್ರ ವಿವರಗಳನ್ನು ಸಲ್ಲಿಸಬೇಕು. ಮುಂದಿನ ವಾರ ಪ್ರಗತಿಯೊಂದು ಕಾಮಗಾರಿಗಳ ಪ್ರಗತಿ ಪರಿಶೀಲಿಸಲಾಗುವುದು ಎಂದು ಹೇಳಿದರು.

ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ವತಿಯಿಂದ ಕೈಗೊಂಡಿರುವ ರಸ್ತೆ ಕಾಮಗಾರಿಗಳ ಥರ್ಡ್‌ ಪಾರ್ಟಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಈ ಸಂದರ್ಭದಲ್ಲಿ ಸೂಚನೆ ನೀಡಿದರು. 

ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನೆ: ಇದಕ್ಕೂ ಮೊದಲು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್‌ ಕುಮಾರ್‌, ಎಲ್ಲಾ ಇಲಾಖೆಗಳ ಎಸ್‌ಸಿಪಿ ಮತ್ತು ಟಿಎಸ್‌ಪಿ ಪ್ರಗತಿ ಪರಿಶೀಲನೆ ನಡೆಸಿದರು. ಪ್ರತಿಯೊಂದು ಇಲಾಖೆಯ ಯೋಜನೆಗಳಲ್ಲಿ ಶೇ.24ರಷ್ಟು ಅನುದಾನವನ್ನು ಪರಿಶಿಷ್ಟ
ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿರಿಸಲಾಗುತ್ತದೆ. ಈ ಅನುದಾನವನ್ನು ಎಲ್ಲಾ ಇಲಾಖೆಗಳು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕು. ಕೆಲವು ಇಲಾಖೆಗಳು  ಅನುದಾನವನ್ನು ನಿರ್ಮಾಣ ಏಜೆನ್ಸಿಗಳಾದ ಕೆಆರ್‌ಐಡಿಎಲ್‌, ನಿರ್ಮಿತಿ ಕೇಂದ್ರ, ಪಿಆರ್‌ಇಡಿ
ಗಳಿಗೆ ಬಿಡುಗಡೆ ಮಾಡಿದ್ದಾರೆ. ಈ ಇಲಾಖೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫಲಾನುಭವಿಗಳ ಆಧಾರಿತ ಯೋಜನೆಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಡಿಸೆಂಬರ್‌ ಅಂತ್ಯದ ಒಳಗಾಗಿ ವಿವಿಧ ಯೋಜನೆಗಳ ಅಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸೌಲಭ್ಯಗಳನ್ನು ವಿತರಣೆ ಮಾಡಬೇಕು. ನಿರ್ಮಾಣ ಕಾಮಗಾರಿಗಳನ್ನು ನವೆಂಬರ್‌ ಅಂತ್ಯದ ಒಳಗಾಗಿ ಆರಂಭಿಸಲು ಸಿದ್ಧತೆ ಪೂರ್ಣಗೊಳಿಸಬೇಕು. ನಿಗದಿತ ಅವಧಿಯ ಒಳಗಾಗಿ ಅನುದಾನ ಬಳಸಲು ಸಾಧ್ಯವಾಗದಿದ್ದರೆ ಆಯಾ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next