Advertisement

ಶಾಂತಿ ಕಾಪಾಡಿ; ಮುಸ್ಲಿಂ ಮುಖಂಡರಿಗೆ ಸಲಹೆ

11:19 AM Apr 22, 2022 | Team Udayavani |

ಹುಬ್ಬಳ್ಳಿ: ನಗರದಲ್ಲಿ ಶಾಂತಿ ಕಾಪಾಡುವಂತೆ ಮುಸ್ಲಿಂ ಧರ್ಮದ ಮುಖಂಡರಿಗೆ ಸಲಹೆ ನೀಡಿದ್ದೇನೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಲ್ಲಾ ಧರ್ಮದವರು ಕಾಳಜಿ ವಹಿಸಬೇಕು ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಮ್‌ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಲಾಟೆ ನಡೆದ ಸ್ಥಳ, ಪೊಲೀಸ್‌ ಠಾಣೆ, ದೇವಸ್ಥಾನ, ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಗಲಾಟೆಯಲ್ಲಿ ಕೆಲ ಪೊಲೀಸರು ಗಾಯಗೊಂಡಿದ್ದಾರೆ. ಸ್ವತಃ ಪೊಲೀಸ್‌ ಆಯುಕ್ತರ ಕಾಲಿಗೆ ಪೆಟ್ಟಾಗಿದೆ. ರಕ್ಷಣೆ ಮಾಡುವ ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರುವುದು ನಮ್ಮ ಸಂವಿಧಾನ ಹಾಗೂ ಕಾನೂನಿಗೆ ಅಗೌರವ ತೋರಿದಂತೆ. ಮುಸ್ಲಿಂ ಧರ್ಮದ ಮುಖಂಡರೊಂದಿಗೆ ಸುದೀರ್ಘ‌ ಸಭೆ ನಡೆಸಿ ಮುಂದೆ ಇಂತಹ ಘಟನೆ ನಡೆಯದಂತೆ ಸಲಹೆ ನೀಡಿದ್ದೇನೆ. ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ನಡೆದ ಘಟನೆ ಕುರಿತು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಇಲ್ಲಿನ ಪೊಲೀಸರು ತಕ್ಷಣ ಕೈಗೊಂಡ ಕ್ರಮದಿಂದ ಆಗಬಹುದಾದ ಅವಘಡ ತಪ್ಪಿಸಿದ್ದಾರೆ. ಎರಡ್ಮೂರು ಗಂಟೆಯಲ್ಲಿ ಗಲಾಟೆಯನ್ನು ತಹಬದಿಗೆ ತಂದಿದ್ದಾರೆ. ನಗರದಲ್ಲಿ ಶಾಂತಿ ನೆಲೆಸಿದ್ದು, ಯಾವುದೇ ಭಯದ ವಾತಾವರಣವಿಲ್ಲ. ಕಾನೂನು ಕೈಗೆತ್ತಿಕೊಂಡಿರುವವರನ್ನು ಯಾವುದೇ ಮುಲಾಜಿಯಿಲ್ಲದೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಮಾಯಕರಿದ್ದರೆ ಸೂಕ್ತ ಸಾಕ್ಷಿಗಳೊಂದಿಗೆ ಪ್ರಕರಣದಿಂದ ಕೈಬಿಡುವುದನ್ನು ನಿಯಮದ ಪ್ರಕಾರ ಕೈಗೊಳ್ಳುವಂತೆ ತಿಳಿಸಿದ್ದೇನೆ. ಶಾಂತಿ ನೆಲೆಸಲು ಎಲ್ಲಾ ಸಮುದಾಯದವನ್ನು ಒಳಗೊಂಡಂತೆ ಶಾಂತಿ ಸಭೆ ಮಾಡಬೇಕು ಎಂದು ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ. ಭಾರತದ ಸುತ್ತಲಿನ ದೇಶಗಳಲ್ಲಿ ಗೊಂದಲ, ಅನಿಶ್ಚಿತತೆ ತಲೆದೋರಿದೆ. ಆದರೆ ಭಾರತದಲ್ಲಿ ಅಂತಹ ಪರಿಸ್ಥಿತಿಯಿಲ್ಲ ಎನ್ನುವುದಕ್ಕೆ ಇಲ್ಲಿರುವ ಸಂವಿಧಾನ ಹಾಗೂ ಪ್ರೀತಿ, ವಿಶ್ವಾಸ ಕಾರಣ ಎಂದರು.

ಎಲ್ಲಾ ಧರ್ಮದಲ್ಲೂ ಕೂಡ ಅಶಾಂತಿ ಮೂಡಿಸುವ, ಸೌಹಾರ್ದತೆ ಕದಡುವ ಶೇ.2 ಜನರಿರುತ್ತಾರೆ. ಅಂತಹವರನ್ನು ನಿಯಂತ್ರಿಸಿದರೆ ಭಾರತ ವಿಶ್ವಗುರು ಆಗಲಿದೆ. ಎಲ್ಲಾ ಧರ್ಮಗಳು ಕೂಡ ಶಾಂತಿಯನ್ನು ಬಯಸುತ್ತವೆ. ಆದರೆ ಕೆಲ ದುಷ್ಟಶಕ್ತಿಗಳು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾರೆ. ಧಾರ್ಮಿಕ ಭಾವನೆಗೆ ಧಕ್ಕೆಯಾದಾಗ ಪ್ರತಿಯಾಗಿ ಕಾನೂನು ಕ್ರಮ ಕೈಗೊಳ್ಳುವುದು ತಪ್ಪು. ಇಂತಹ ಘಟನೆಗಳು ನಡೆದಾಗ ಭಾವನಾತ್ಮಕವಾಗಿ ಚಿಂತನೆ ಮಾಡದೆ ಕಾನೂನು ಚೌಕಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು. ಇಂತಹ ಸೂಕ್ಷ್ಮ ವಿಚಾರದಲ್ಲಿ ಜನರು ರಾಜಕೀಯ ಹೇಳಿಕೆಗೆ ಹೆಚ್ಚು ಪ್ರತಿಕ್ರಿಯಿಸಬಾರದು ಎಂದರು.

ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಲಾಟೆಯಲ್ಲಿ ಪಾಲ್ಗೊಂಡವರನ್ನು ಬಂಧಿಸಲಾಗುತ್ತಿದೆ. ಮಹಾನಗರ ಪೊಲೀಸ್‌ ಆಯುಕ್ತ ಲಾಭುರಾಮ ಅವರು ಉತ್ತಮ ಹಾಗೂ ದಕ್ಷ ಅಧಿಕಾರಿ. ಪ್ರಾಮಾಣಿಕವಾಗಿ ತನಿಖೆ ಮಾಡುತ್ತಾರೆ. ಹೀಗಾಗಿ ಈ ಗಲಾಟೆಯನ್ನು ನ್ಯಾಯಾಂಗ ತನಿಖೆ ಅಥವಾ ಇತರೆ ತನಿಖಾ ಸಂಸ್ಥೆಗಳ ಮೂಲಕ ನಡೆಸಬೇಕು ಎನ್ನುವ ಅಭಿಪ್ರಾಯವಿಲ್ಲ ಎಂದು ತಿಳಿಸಿದರು. ಆಯೋಗದ ಕಾರ್ಯದರ್ಶಿ ಮೊಹ್ಮದ್‌ ನಜೀರ್‌, ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್‌.ಆರ್‌ .ಪುರುಷೋತ್ತಮ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಸೇರಿದಂತೆ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next