ಚನ್ನರಾಯಪಟ್ಟಣ: ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ದೌರ್ಬಲ್ಯವೇ ಕಾರಣ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ ಆರೋಪಿಸಿದರು.
ಪಟ್ಟಣದ ಕೃಷ್ಣ ರಾಜೇಂದ್ರ ಒಡೆಯರ್ ವೃತ್ತದಲ್ಲಿ ಕಾಂಗ್ರೆಸ್‌ನಿಂದ ನಡೆದ ಜನಧ್ವನಿ ಧರಣಿ ಹಾಗೂ ಸತ್ಯಾಗ್ರಹದಲ್ಲಿ ಮಾತನಾಡಿ, ತಾಲೂಕು ಆಡಳಿತ ಸಮರ್ಪಕವಾಗಿ ಕೆಲಸ ಮಾಡದ ಪರಿಣಾಮ ಕೊಲೆ, ಸುಲಿಗೆಗಳು ನಡೆಯುತ್ತಿವೆ, ಕ್ಷೇತ್ರದ ಜನರ ನೆಮ್ಮದಿಯಿಂದ ಬದುಕು ನಡೆಸಬೇಕೆಂದರೆ ಜನಪ್ರತಿನಿಧಿ ಉತ್ತಮವಾಗಿ ಆಡಳಿತ ಮಾಡಬೇಕು ಎಂದರು.
ತಾಲೂಕಿನಲ್ಲಿ ಸರಣಿ ಹತ್ಯೆಗಳು ನಡೆಯುತ್ತಿದ್ದರೂ ಖಂಡಿಸುವ ಸಾಮರ್ಥ್ಯ ಶಾಸಕರಿಗೆ ಇಲ್ಲ. ದಕ್ಷ ಅಧಿಕಾರಿ ಪಿಎಸ್‌ಐ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಯಾಕೆ ಇನ್ನೂ ತನಿಖೆ ಚುರುಕುಗೊಂಡಿಲ್ಲ, ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಕ್ಷೇತ್ರ ಭೂಗತ ಲೋಕವಾಗುತ್ತಿರುವುದು ನೋಡಿದರೆ ತಾಲೂಕಿನ ಜನತೆ ತಲೆ ತಗ್ಗಿಸುವಂತಾಗುತ್ತಿದೆ. ತಾಲೂಕಿನ ಜನತೆಗೆ ನೆಮ್ಮದಿ ಬೇಕಾಗಿದೆ, ಕಣಿವೆ ರಾಜ್ಯಗಳ ರೀತಿಯಲ್ಲಿ ಇಲ್ಲಿ ಅಶಾಂತಿ ವಾತಾವರಣ ಮೂಡುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ನಾಡಿನ ಜನತೆಯನ್ನು ನಂಬಿಸುವಲ್ಲಿ ಸುಳ್ಳಿನ ಫ್ಯಾಕ್ಟರಿಯಾಗಿದ್ದಾರೆ, ರೈತ ವಿರೋಧಿ ಭೂಸುಧಾರಣಾ ಸೇರಿದಂತೆ ವಿವಿಧ ಕಾಯ್ದೆಗಳ ತಿದ್ದುಪಡಿಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮ ಆಚರಿಸಿದರು. ನಂತರ ತಹಶೀಲ್ದಾರ್ ಜೆ.ಬಿ.ಮಾರುತಿಗೆ ಮನವಿ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎಸ್ .ಜಯಕುಮಾರ್, ಮಾಜಿ ಸದಸ್ಯ ಮಂಜೇಗೌಡ, ಕಿಶೋರ್, ತಾಪಂ ಅಧ್ಯಕ್ಷೆ ಶ್ಯಾಮಲಾ, ಎಪಿಎಂಸಿ ನಿರ್ದೇಶಕ ಎಂ.ಶಂಕರ್, ಯುವ ಕಾಂಗ್ರೆಸ್ ಮುಖಂಡ ಯುವರಾಜ್, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪಿ.ಎಸ್.ಜಯರಾಮ್ ಇದ್ದರು.