Advertisement

ಡಿಸಿಸಿ ಬ್ಯಾಂಕ್‌ ಘನತೆ ಕಾಪಾಡಿ

03:14 PM Mar 11, 2018 | Team Udayavani |

ಕೋಲಾರ: ಬ್ಯಾಂಕಿನ ಕ್ರೋಢೀಕೃತ ನಷ್ಟ 58 ಕೋಟಿ ರೂ.ನಿಂದ 10 ಕೋಟಿ ರೂ.ಗೆ ಇಳಿದಿದೆ. ನೌಕರರು ಬದ್ಧತೆಯಿಂದ ಕೆಲಸ ಮಾಡಿ ನಿಷ್ಕ್ರಿಯ ಆಸ್ತಿ ಶೇ.2ಕ್ಕೆ ಬರುವಂತೆ ಮಾಡಿದರೆ ಇಡೀ ದೇಶವೇ ನಮ್ಮ ಬ್ಯಾಂಕ್‌
ನತ್ತ ನೋಡುತ್ತದೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ಶನಿವಾರ ಜಿಲ್ಲಾ ಸಹಕಾರಿ ಯೂನಿಯನ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬ್ಯಾಂಕಿನ ಆರ್ಥಿಕ ವರ್ಷದ ಕೊನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.

ಬದ್ಧತೆ ಪ್ರದರ್ಶಿಸಿ: ಬ್ಯಾಂಕ್‌ ದಿವಾಳಿಯಾಗಿದ್ದ ಸಂದರ್ಭದಲ್ಲಿ ಜನತೆ ಬ್ಯಾಂಕಿನಿಂದಲೇ ದೂರವಾಗಿದ್ದರು. ಈ ಬ್ಯಾಂಕ್‌ ಮತ್ತೆ ತಲೆಯೆತ್ತಲು ಸಾಧ್ಯವೇ ಇಲ್ಲ ಎಂದು ಮಾತನಾಡಿಕೊಂಡದ್ದೂ ಉಂಟು. ಆದರೆ, ನಮ್ಮ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ 58 ಕೋಟಿ ರೂ. ಇದ್ದ ಕ್ರೋಢೀಕೃತ ನಷ್ಟ 10 ಕೋಟಿ ರೂ.ಗೆ ಇಳಿದಿದೆ. ಇದಕ್ಕೆ  ಬ್ಯಾಂಕಿನ ಅಧಿಕಾರಿಗಳು ಹಾಗೂ ನೌಕರರ ಪರಿಶ್ರಮವೇ ಕಾರಣ. ಇದೇ ಬದ್ಧತೆಯನ್ನು ಆರ್ಥಿಕ ವರ್ಷದ ಕೊನೆಯಲ್ಲಿ ಪ್ರದರ್ಶಿಸಬೇಕು. ಮಾ.25 ರೊಳಗೆ ಸಾಲ ವಸೂಲಾತಿ ಪೂರ್ಣಗೊಳಿಸ ಬೇಕೆಂದು ಕಿವಿಮಾತು ಹೇಳಿದರು.

ಕಳೆದ ತಿಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲೇ ನಿಮಗೆ ಸೂಚನೆ ನೀಡಲಾಗಿದೆ. ಮಾ.25 ರೊಳಗೆ ಇರುವ ಬಾಕಿ ಸಾಲ ವಸೂಲಾದರೆ ಬ್ಯಾಂಕಿನ ಗೌರವ ಉಳಿಯುತ್ತದೆ. ಇಡೀ ದೇಶದ ಸಹಕಾರ ವ್ಯವಸ್ಥೆಯೇ ನಮ್ಮ ಕಡೆ ನೋಡುವಂತಾಗುತ್ತದೆ ಎಂದರು.

ಬ್ಯಾಂಕ್‌ ಉಳಿಸಿ: ನಿಮ್ಮ ಬದ್ಧತೆಯ ಕೆಲಸಕ್ಕೆ ಬ್ಯಾಂಕ್‌ ಸೂಕ್ತ ಪ್ರತಿಫ‌ಲ ನೀಡುತ್ತದೆ. ಉತ್ತಮ ವೇತನ ನೀಡುತ್ತಿದೆ. ಹೆಮ್ಮೆಯಿಂದ ನಾನು ಡಿಸಿಸಿ ಬ್ಯಾಂಕ್‌ ನೌಕರ ಎಂದು ಹೇಳಿಕೊಳ್ಳುವ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಆಡಳಿತ ಮಂಡಳಿ ಮಾತ್ರವಲ್ಲ, ನೀವು ಕೂಡ ಪ್ರಮುಖ ಕಾರಣರಾಗಿದ್ದೀರಿ. ಅದನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.

Advertisement

ಸಾಮರ್ಥ್ಯ ಪ್ರದರ್ಶಿಸಿ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಶಾಖೆಗಳಲ್ಲಿ ಸಾಲ ವಸೂಲಾತಿ ಪ್ರಮಾಣ, ಬಾಕಿ ಇರುವ ಸಾಲದ ಪ್ರಮಾಣ ಮತ್ತಿತರ ಅಂಶಗಳ ಪರಿಶೀಲನೆ ನಡೆಸಿ, ರಾತ್ರಿ, ಹಗಲೆನ್ನದೇ ನಿಷ್ಠೆಯಿಂದ ಕೆಲಸ ಮಾಡಿ ಸಾಲ ವಸೂಲಾತಿ ಮಾಡುವ ಮೂಲಕ ನಿಮ್ಮ ಸಾಮರ್ಥ್ಯ ಪ್ರದರ್ಶಿಸಬೇಕೆಂದು ಮನವಿ ಮಾಡಿದರು.

ಮನೆ ಸಾಲ, ಚಿನ್ನದ ಸಾಲ, ರೈತರಿಗೆ ನೀಡಿರುವ ವಿವಿಧ ಸಾಲಗಳ ಕಂತುಗಳ ಸಮರ್ಪಕ ಮರುಪಾವತಿಯತ್ತ ನೌಕರರು ಗಮನ ಹರಿಸಬೇಕು. ಭಾನುವಾರವೂ ಕೆಲಸ ಮಾಡಿ ಸಾಲಗಾರರ ಮನೆಗೆ ಹೋಗಿ ಮನವೊಲಿಸಿ ಸಾಲ ವಸೂಲಾತಿಗೆ ಶ್ರಮಿಸಬೇಕೆಂದರು. ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕ ಶಂಕರನಾರಾಯಣಗೌಡ, ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ, ವ್ಯವಸ್ಥಾಪಕರಾದ ಬೈರೇಗೌಡ, ಶಿವಕುಮಾರ್‌, ಹುಸೇನ್‌ಸಾಬ್‌ ದೊಡ್ಡಮನಿ ಮತ್ತಿತರರಿದ್ದರು. 

ತಮಗೆ ಅನ್ನ ನೀಡುತ್ತಿರುವ ಡಿಸಿಸಿ ಬ್ಯಾಂಕಿನ ಘನತೆ ಉಳಿಸುವುದು ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿ.
ಇದನ್ನು ಮರೆಯಬಾರದು. ಮಾರ್ಚ್‌ ಅಂತ್ಯದವರೆಗೂ ನಿಮ್ಮ ಹಬ್ಬ, ಹರಿದಿನಗಳನ್ನು ಮರೆತುಬಿಡಿ. ನಿಮ್ಮ ಕುಟುಂಬ
ನೆಲೆನಿಲ್ಲಲು ಕಾರಣವಾದ ಬ್ಯಾಂಕ್‌ನ ಗೌರವ ಹೆಚ್ಚಿಸಲು ಏನು ಮಾಡಬೇಕೆಂಬ ಬಗ್ಗೆ ಚಿಂತನೆ ಮಾಡಬೇಕು.
 ಬ್ಯಾಲಹಳ್ಳಿ ಗೋವಿಂದಗೌಡ, ಅಧ್ಯಕ್ಷರು, ಡಿಸಿಸಿ ಬ್ಯಾಂಕ್‌ ‘

ಮಹಿಳೆಯರಿಂದ ಬ್ಯಾಂಕ್‌ ಉಳಿದಿದೆ ಬ್ಯಾಂಕ್‌ ವಿರುದ್ಧ ಅಪಪ್ರಚಾರ, ವಿವಿಧ ರೀತಿಯ ವ್ಯಾಖ್ಯಾನಗಳು ಕೇಳಿ ಬಂದರೂ ಅದಾವುದಕ್ಕೂ ಮಹಿಳಾ ಗ್ರಾಹಕ ತಾಯಂದಿರು ಗಮನ ನೀಡಲಿಲ್ಲ. ಇಂದು ಡಿಸಿಸಿ ಬ್ಯಾಂಕ್‌ ಉಳಿದಿದೆ, ಬೆಳೆದಿದೆ ಎಂದರೆ ಅದಕ್ಕೆ ಮಹಿಳೆಯರ ಪ್ರಾಮಾಣಿಕ ಸಾಲ ಮರುಪಾವತಿಯೇ ಕಾರಣ. ಮಹಿಳೆಯರಿಗೆ ನೀಡಿರುವ ಸಾಲ ಮರುಪಾವತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಇತರೆ ಸಾಲಗಳ ಬಗ್ಗೆಯೂ ಗಮನ ಹರಿಸುವ ಅಗತ್ಯವಿದೆ. ಈ
ನಿಟ್ಟಿನಲ್ಲಿ ಸಿಬ್ಬಂದಿ ಶ್ರದ್ಧೆಯಿಂದ ಕೆಲಸ ಮಾಡಬೇಕೆಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next