Advertisement

ಹಾಲು ಪೂರೈಕೆಯಲ್ಲಿ ಸ್ವಚ್ಛತೆ ಕಾಪಾಡಿ

11:12 AM Sep 25, 2018 | Team Udayavani |

ತಿ.ನರಸೀಪುರ: ಬ್ಯಾಕ್ಟೀರಿಯಾಗಳ ದಾಳಿಯಿಂದಾಗಿ ರಾಜ್ಯದ ಹಾಲಿನ ಉತ್ಪನ್ನಗಳು ಅಂತರ ರಾಜ್ಯ ಹಾಗೂ ದೇಶಗಳಿಗೆ ರಫ್ತು ಆಗುತ್ತಿಲ್ಲ ಎಂದು ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮುಲ್‌) ಅಪರ ನಿರ್ದೇಶಕ ಮಲ್ಲಿಕಾರ್ಜುನ ಆತಂಕ ವ್ಯಕ್ತಪಡಿಸಿದರು.

Advertisement

ತಾಲೂಕಿನ ಎಂ.ಕೆಬ್ಬೇಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ರಾಸುಗಳಿಂದ ಕರೆದ ಹಾಲನ್ನು ಕನಿಷ್ಠ ಅರ್ಧ ತಾಸಿನೊಳಗೆ ಶಿಥೀಲಿಕರಣ ಕೇಂದ್ರದಲ್ಲಿ ಶೇಖರಿಸಿಟ್ಟರೆ ಹಾಲಿನ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿರುತ್ತದೆ. ಸರಬರಾಜಿನಲ್ಲಿ ಆಗುವ ವಿಳಂಬ ಮತ್ತು ಅಶುದ್ಧತೆಯ ಪರಿಣಾಮದಿಂದ ಹಾಲಿನಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವಂತೆ ಮಾಡುತ್ತದೆ ಎಂದರು.

ವಿದೇಶದಲ್ಲಿ ಬಹುತೇಕ ಹೈನುಗಾರಿಕೆ ಯಾಂತ್ರೀಕರಣಗೊಂಡಿದ್ದರಿಂದ ಅಲ್ಲಿ ಯಾರೂ ಕೂಡ ಹಾಲನ್ನು ಕೈಯಲ್ಲಿ ಮುಟ್ಟುವುದಿಲ್ಲ. ಜಾನುವಾರುಗಳಿಗೆ ಲವಣಾಂಶ ಮೇವನ್ನು ಕೊಟ್ಟು ಹಾಲಿನಲ್ಲಿ ಗುಣಮಟ್ಟ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯದರ್ಶಿ ಎಸ್‌.ಸಿದ್ದರಾಜು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ 1.68 ಲಕ್ಷ ರೂ. ನಿವ್ವಳ ಲಾಭ ಬಂದಿದ್ದು, ಉತ್ಪಾದಕರಿಗೆ ಶೇ.65 ರಷ್ಟನ್ನು ಬೋನಸ್‌ ನೀಡಲಾಗುವುದು ಎಂದರು.

ಸಭೆಯಲ್ಲಿ ಸಂಘದ ಅಧ್ಯಕ್ಷ ಎಸ್‌.ಸ್ವಾಮಿ, ಉಪಾಧ್ಯಕ್ಷ ಸೋಮಶೇಖರಪ್ಪ, ನಿರ್ದೇಶಕರಾದ ಬಿ.ರೇವಣ್ಣ, ಬಿ.ಚನ್ನಬಸವಯ್ಯ, ಪಿ.ಮಹದೇವಯ್ಯ, ರಂಗಸ್ವಾಮಿ, ಶಿವನಂಜಮ್ಮ, ಕಮಲಮ್ಮ, ಎನ್‌.ಮಹೇಶ, ಗ್ರಾಪಂ ಸದಸ್ಯ ಬಸವರಾಜು, ಹಾಲು ಪರೀಕ್ಷಕ ಪಿ.ರಾಜು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next