ಯಾದಗಿರಿ: ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಅಂಗವಾಗಿ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕರು ಮನೆ ಮನೆಗೆ ಭೇಟಿ ನೀಡಿ ತಾಯಂದಿರಿಗೆ/ಪೋಷಕರಿಗೆ ಅತಿಸಾರ ಭೇದಿ ನಿಯಂತ್ರಣ ಬಗ್ಗೆ ಓ.ಆರ್.ಎಸ್ ದ್ರಾವಣ ಹಾಗೂ ಝಿಂಕ್ ಮಾತ್ರೆ ಹೇಗೆ ನೀಡಬೇಕು ಎಂಬುದರ ಮಾಹಿತಿ ನೀಡುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಹಬೀಬ್ ಉಸ್ಮಾನ್ ಪಟೇಲ್ ತಿಳಿಸಿದರು.
ಜಿಲ್ಲೆಯಾದ್ಯಂತ ಜೂನ್ 3ರಿಂದ 17ರ ವರೆಗೆ ನಡೆಯಲಿರುವ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
5 ವರ್ಷದೊಳಗಿನ ಮಕ್ಕಳ ಮನೆಯಲ್ಲಿ ಓ.ಆರ್.ಎಸ್ ಪಾಕೇಟ್ ವಿತರಣೆ ಮಾಡಿ, ಓ.ಆರ್.ಎಸ್ ತಯಾರಿಸುವುದು ಹಾಗೂ ಮಕ್ಕಳಿಗೆ ನೀಡುವ ಪ್ರಮಾಣದ ಕುರಿತು ಮಾಹಿತಿ ನೀಡುವರು. ಅತಿಸಾರ ಭೇದಿಯಾದ ಮಗುವಿಗೆ ಓ.ಆರ್.ಎಸ್ ದ್ರಾವಣ ನೀಡಿ ಪ್ರತಿದಿನ ಒಂದು ಝಿಂಕ್ ಮಾತ್ರೆಯನ್ನು 14 ದಿವಸಗಳವರೆಗೆ ನೀಡಬೇಕು. ಜೊತೆಯಲ್ಲಿ ಕೈ ತೊಳೆಯುವ ವಿಧಾನದ ಬಗ್ಗೆ ಹಾಗೂ ಸ್ವಚ್ಛತೆ ಬಗ್ಗೆ ಕೂಡ ತಿಳಿಸುವರು ಎಂದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ| ಲಕ್ಷ್ಮೀಕಾಂತ ಮಾತನಾಡಿ, ಅತಿಸಾರ ಭೇದಿ ಸಮಯದಲ್ಲಿ ಹಾಗೂ ಅತಿಸಾರ ಭೇದಿ ನಂತರ ತಾಯಿಯ ಎದೆ ಹಾಲು ಮತ್ತು ಪೂರಕ ಆಹಾರ ಮುಂದುವರಿಸಬೇಕು. ಮಗು ಹುಟ್ಟಿದಾಗಿನಿಂದ 6 ತಿಂಗಳವರೆಗೆ ತಾಯಿಯ ಎದೆ ಹಾಲು ಮಾತ್ರ ನೀಡಬೇಕು. ಆಹಾರ ತಯಾರಿಸುವಾಗ ಹಾಗೂ ತಿನ್ನಿಸುವಾಗ ಮೊದಲು ಮತ್ತು ನಂತರ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಅತಿಸಾರ ಭೇದಿ ಚಿಕಿತ್ಸೆಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಆಶಾ ಕಾರ್ಯಕರ್ತೆಯರು ಹಾಗೂ ಕಿರಿಯ ಆರೋಗ್ಯ ಸಹಾಯಕರನ್ನು ಸಂಪರ್ಕಿಸಲು ಸಲಹೆ ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ| ಹಣಮಂತ ರೆಡ್ಡಿ ಮಾತನಾಡಿ, ಓ.ಆರ್.ಎಸ್ ಹಾಗೂ ಝಿಂಕ್ ಮಾತ್ರೆ ನೀಡಿ ಅತಿಸಾರ ಭೇದಿಯನ್ನು ತಡೆಯಬಹುದು. ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಎಲ್ಲರೂ ಊಟಕ್ಕೆ ಮೊದಲು ಮತ್ತು ಶೌಚಾಲಯದ ನಂತರ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ| ನಾಗನಾಥ, ಡಾ| ಜ್ಞಾನೇಶ್ವರ, ಶಂಕರಾನಂದ, ಸುದರ್ಶನ, ಗ್ರಾಪಂ ಸದಸ್ಯರಾದ ಶರಣಗೌಡ, ಶಿವರಾಯ, ಸೋಮನಾಥರೆಡ್ಡಿ, ಸಿದ್ದಪ್ಪಹಳ್ಳಿ, ನಾಗಮ್ಮ ಹಾಗೂ ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಅಬ್ದುಲ್ಸಾಬ್ ನಿರೂಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ವಂದಿಸಿದರು.