Advertisement

ಶುದ್ಧ ನೀರಿನ ಘಟಕ ಸಮರ್ಪಕವಾಗಿ ನಿರ್ವಹಿಸಿ

07:27 AM Jun 05, 2019 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇದರ ಪ್ರಯೋಜನ ಜನರಿಗೆ ತಲುಪಲು ಗಂಭೀರ ಕ್ರಮ ವಹಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಸುರಕ್ಷಿತ ಕುಡಿಯುವ ನೀರಿನ ಉದ್ದೇಶಕ್ಕಾಗಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅನುಷ್ಠಾನ ಮಾಡುವವರು ಸಹ ಇದರ ಬಗ್ಗೆ ಕಾಳಜಿ ವಹಿಸಿಲ್ಲ. ನಿರ್ವಹಣೆ ಯಾರೂ ಸಹ ಮಾಡುತ್ತಿಲ್ಲವೆಂಬ ಪ್ರಸ್ತಾಪವನ್ನು ಸಭೆಯ ಮುಂದಿಟ್ಟರು.

ಸರಿಪಡಿಸಲು ಕ್ರಮ ವಹಿಸಿ: ಕುಡಿಯುವ ನೀರಿನ ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಕುರಿತು ತೀವ್ರವಾಗಿ ಪ್ರಶ್ನಿಸಿದ ಉಸ್ತುವಾರಿ ಸಚಿವರು, ಉದ್ಘಾಟನೆಯಾದ ಬಳಿಕ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಜನರಿಗೆ ಉಪಯೋಗವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಏಜೆನ್ಸಿಗಳಿಗೆ ಹೊಣೆಗಾರಿಕೆ ನೀಡಿ ಸರಿಪಡಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಪ್ರತ್ಯೇಕ ಸಭೆ ನಡೆಸಿ: ಶಾಸಕರ ಆರ್‌. ನರೇಂದ್ರ ಸಹ ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಶುದ್ಧ ಕುಡಿಯುವ ನೀರಿನ ಘಟಕಗಳು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಾರ್ಯ ನಿರ್ವಹಣೆ ಮಾಡುವ ಸಂಬಂಧ ಪ್ರತ್ಯೇಕ ಸಭೆ ಕರೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಸಂಬಂಧಪಟ್ಟ ಇಲಾಖೆಗಳು ಶುದ್ಧ ಕುಡಿಯುವ ನೀರಿನ ನಿರ್ವಹಣೆ ಸಂಬಂಧ ಹೆಚ್ಚು ಗಮನ ನೀಡಬೇಕು ಎಂದು ಸೂಚಿಸಿದರು. ಜಿಪಂ ಸಿಇಒ ಕೆ.ಎಸ್‌. ಲತಾ ಕುಮಾರಿ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕಗಳ ಸಂಬಂಧ ಈಗಾಗಲೇ ಸಭೆ ನಡೆಸಲಾಗಿದೆ. ಕಾರ್ಯ ಪೂರ್ಣಗೊಳಿಸದೇ ಇರುವ ಏಜೆನ್ಸಿಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಈ ಕುರಿತು ವಿಶೇಷ ಗಮನ ನೀಡಲಾಗುತ್ತದೆ ಎಂದರು.

Advertisement

ನೀರು, ಮೇವಿಗೆ ತೊಂದರೆ ಬೇಡ: ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು, ಕುಡಿಯವ ನೀರು ಜಾನುವಾರುಗಳಿಗೆ ಮೇವು ಸೇರಿದಂತೆ ಅಭಾವ ಪರಿಸ್ಥಿತಿಯಲ್ಲಿ ಯಾವುದೇ ತೊಂದರೆಯಾಗದ ಹಾಗೆ ಅಧಿಕಾರಿಗಳು ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಂಬಂಧ ಗ್ರಾಮಗಳನ್ನು ಗುರುತಿಸುವಾಗ ಜನವಸತಿ ಪ್ರದೇಶಗಳನ್ನು ಪರಿಗಣಿಸಬೇಕು. ವಾಸ್ತವ ಅಂಶಗಳನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳು ಎಲ್ಲ ಜನರಿಗೂ ತಿಳಿಯುವಂತಾಗಬೇಕು. ಯೋಜನೆಗಳ ಬಗ್ಗೆ ಕಾರ್ಯಾಗಾರ ನಡೆಸಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಕೃಷಿ, ತೋಟಗಾರಿಕೆ, ಕೆರೆಗಳಿಗೆ ನೀರು, ಅರಣ್ಯ ಇಲಾಖೆ, ಒಳಚರಂಡಿ, ಕೈಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಸಭೆಯಲ್ಲಿ ಶಾಸಕ ಸಿ.ಎಸ್‌. ನಿರಂಜನಕುಮಾರ್‌, ಜಿಪಂ ಅಧ್ಯಕ್ಷೆ ಶಿವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚನ್ನಪ್ಪ, ಮರಗದಮಣಿ, ಉಮಾವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next