Advertisement

3 ತಿಂಗಳೊಳಗೆ ಮುಖ್ಯ ರಸ್ತೆ ಅಗಲೀಕರಣ

10:06 AM Mar 05, 2019 | Team Udayavani |

ಚಿತ್ರದುರ್ಗ: ನಗರದ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಿ ಸಿಮೆಂಟ್‌ ರಸ್ತೆ ನಿರ್ಮಿಸಲು 19 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇನ್ನು ಮೂರು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ
ಸೂಚಿಸಿದರು.

Advertisement

ನಗರದ ಚಳ್ಳಕೆರೆ ಗೇಟ್‌ ಸಮೀಪ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಚಿತ್ರದುರ್ಗ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕಾಗಿ ಈ ಹಿಂದೆಯೇ ಅನುದಾನ ಬಿಡುಗಡೆಯಾಗಿದ್ದರೂ ಅನುಷ್ಠಾನವಾಗಿರಲಿಲ್ಲ. ಈಗ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಶಿವರಾತ್ರಿಯಿಂದಲೇ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದರು. 

ಚಳ್ಳಕೆರೆ ಗೇಟ್‌ನಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ಅಗಲೀಕರಣ ಮಾಡಿ ಸಿಮೆಂಟ್‌ ರಸ್ತೆಯನ್ನಾಗಿಸಲಾಗುತ್ತದೆ. ರಸ್ತೆಯ ಮಧ್ಯ ಭಾಗದಿಂದ ರಸ್ತೆ ಎರಡು ಬದಿಯಲ್ಲಿ 13.5 ಮೀಟರ್‌ ಅಗಲ ಮಾಡಿ ನಿರ್ಮಾಣ ಮಾಡಲಿದ್ದು ರಸ್ತೆ ವಿಭಜಕ ಸೇರಿ ಪಾದಚಾರಿಗಳಿಗೆ ಓಡಾಡಲು ಎರಡು ಬದಿ ಎರಡು ಮೀಟರ್‌ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ. ಕಾಮಗಾರಿ ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗ ನಗರದ ಮುಖ್ಯ ರಸ್ತೆ ಅಗಲೀಕರಣ ಮಾಡಬೇಕೆಂದು ಬಹುದಿನಗಳ ಬೇಡಿಕೆಯಾಗಿದ್ದು ಇದನ್ನು ಈಡೇರಿಸಲಾಗಿದೆ. ಚಳ್ಳಕೆರೆ ಗೇಟ್‌ ನಿಂದ ಪ್ರವಾಸಿ ಮಂದಿರದವರೆಗೆ 19 ಕೋಟಿ ರೂ. ಗಳಲ್ಲಿ ಹಾಗೂ ಪ್ರವಾಸಿಮಂದಿರದಿಂದ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತದಿಂದ ಮಾಳಪ್ಪನಹಟ್ಟಿ ರಸ್ತೆಯವರೆಗೆ 18 ಕೋಟಿ ರೂ. ಮಂಜೂರಾಗಿದ್ದು ಟೆಂಡರ್‌ ಹಂತದಲ್ಲಿದೆ. ಮುಂದಿನ ಕೆಲವೇ ತಿಂಗಳಲ್ಲಿ ರಸ್ತೆ ಅಗಲೀಕರಣ ಮಾಡಿ ಸಿಸಿ ರಸ್ತೆ ನಿರ್ಮಿಸಲಾಗುತ್ತದೆ ಎಂದರು.

ಅಗಲೀಕರಣದ ವೇಳೆ ಕೆಲವು ಕಟ್ಟಡಗಳನ್ನು ತೆರವು ಮಾಡಬೇಕಾಗಿದ್ದು ಈಗಾಗಲೇ ವರ್ತಕರ ಜೊತೆ ಚರ್ಚಿಸಲಾಗಿದೆ. ಅನೇಕ ಜನರು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಲು ಹಾಗೂ ಸಹಕಾರ ನೀಡಲು ಒಪ್ಪಿದ್ದಾರೆ. ನಿಯಮದನ್ವಯ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು ರಸ್ತೆಯ ಜಾಗವನ್ನು ತೆರವು ಮಾಡಬೇಕಾಗುತ್ತದೆ. ರಸ್ತೆಯ ಬದಿ ಪಾದಚಾರಿ ಮಾರ್ಗ ಸೇರಿದಂತೆ ವಿಭಜಕಗಳನ್ನು ನಿರ್ಮಿಸಿ ಆಕರ್ಷಕ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

Advertisement

ಸಂಸದ ಬಿ.ಎನ್‌. ಚಂದ್ರಪ್ಪ ಮಾತನಾಡಿ, ಈ ಹಿಂದಿನ ಸರ್ಕಾರ ನಗರದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದ್ದರಿಂದ ಅಗಲೀಕರಣಕ್ಕೆ ಸಹಕಾರಿಯಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಎಚ್‌.ಆಂಜನೇಯ ಆಡಳಿತಾವಧಿಯಲ್ಲೇ ವಿಶೇಷ ಅನುದಾನವಾಗಿ 25 ಕೋಟಿ ರೂ.ಗಳನ್ನು ನೀಡಲಾಗಿತ್ತು. ತಾಂತ್ರಿಕ ಕಾರಣದಿಂದ ರಸ್ತೆ ಅಗಲೀಕರಣವಾಗಿರಲಿಲ್ಲ. ಈಗ ಆ ಕಾರ್ಯ ಮಾಡಲಾಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ತಾವು ಎಂದೂ ಪಕ್ಷ ರಾಜಕಾರಣ ಮಾಡಿಲ್ಲ. ಅದೇ ರೀತಿ ಎಲ್ಲ ಪಕ್ಷದವರು ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಿದ್ದಾರೆಂದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌, ಅಪರ ಜಿಲ್ಲಾಧಿಕಾರಿ ಕೆ. ಸಂಗಪ್ಪ, ಉಪವಿಭಾಗಾಕಾರಿ ವಿಜಯಕುಮಾರ್‌, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ಸತೀಶ್‌ಬಾಬು, ಎಇಇ ಕೆ.ಜಿ. ಜಗದೀಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಫಾತ್ಯರಾಜನ್‌, ಮರುಳಾರಾಧ್ಯ ಮತ್ತಿತರರು ಇದ್ದರು.

ಭಾರೀ ವಾಹನ ಪ್ರವೇಶಕ್ಕೆ ನಿರ್ಬಂಧ ಆದೇಶ ಹೊರಡಿಸಿ ಚಳ್ಳಕೆರೆ ಗೇಟ್‌ ಸಮೀಪದ ಪೆಟ್ರೋಲ್‌ ಬಂಕ್‌, ರಸ್ತೆಗೆ ಹೊಂದಿಕೊಂಡು ಇರುವುದರಿಂದ ಇಲ್ಲಿಗೆ ಅನೇಕ ಅದಿರು ತುಂಬಿದ ಲಾರಿಗಳು ಇಂಧನ ತುಂಬಿಸಲು ಬರುತ್ತವೆ. ಲಾರಿಗಳು ಕಿಲೋ ಮೀಟರ್‌ ಗಟ್ಟಲೆ ನಿಲುಗಡೆಯಾಗಲಿದ್ದು ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಶಾಲಾ-ಕಾಲೇಜು ವಾಹನಗಳು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಪೆಟ್ರೋಲ್‌ ಬಂಕ್‌ ಪಕ್ಕದಲ್ಲೇ ಎರಡು ಕಲ್ಯಾಣಮಂಟಪಗಳಿದ್ದು ಸಾಕಷ್ಟು ಜನಜಂಗುಳಿಯಿಂದ ಕೂಡಿರುತ್ತದೆ. ಆದ್ದರಿಂದ ನಗರದೊಳಗೆ ಯಾವುದೇ ಅದಿರು ಲಾರಿ ಹಾಗೂ ಭಾರೀ ವಾಹನಗಳು ಪ್ರವೇಶಿಸದಂತೆ ನಿರ್ಬಂಧಿಸಬೇಕು. ಈ ಆದೇಶ ಇಂದಿನಿಂದಲೆ ಜಾರಿಗೆ ಬರಲಿದ್ದು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಅದಿರು ತುಂಬಿದ ಲಾರಿಗಳು ಚಳ್ಳಕೆರೆ ಟೋಲ್‌ ಗೇಟ್‌ನಿಂದ ಒಳ ಪ್ರವೇಶ ಮಾಡಿದರೆ ಕೂಡಲೇ ಸೀಜ್‌ ಮಾಡಿ ಪ್ರಕರಣ ದಾಖಲು ಮಾಡುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next