Advertisement

Desi Swara: ಮಹಾಮಹಿಮ ಮಹಾದೇವ ಶಿವ: ಇಷ್ಟಾರ್ಥಗಳನ್ನು ಅನುಗ್ರಹಿಸುವ ಕರುಣಾಳು

11:38 AM Mar 09, 2024 | Team Udayavani |

ತ್ರಿಮೂರ್ತಿಗಳಲೊಬ್ಬನಾದ ಮಹೇಶ್ವರ ಭಕ್ತಿಗೆ ಒಲಿದು ಇಷ್ಟಾರ್ಥಗಳನ್ನಿತ್ತು ಅನುಗ್ರಹಿಸುವ ಕರುಣಾಳು. ಭಾರತದ ಉದ್ದಗಲಕ್ಕೂ ಅನೇಕ ಲಿಂಗರೂಪಿ ಶಿವನ ದೇವಾಲಯಗಳಿವೆ. ಶಾಸ್ತ್ರೋಕ್ತವಾಗಿ ಪೂಜೆ ನಡೆಯುತ್ತದೆ. ಹಿಂದೂಗಳಿರುವ ವಿದೇಶಗಳಲ್ಲೂ ಶಿವಾಲಯಗಳಿದ್ದು ಅಲ್ಲಿಯೂ ಪೂಜೆ ಸಾಂಗೋಪಾಂಗವಾಗಿ ನಡೆಯುತ್ತದೆ.

Advertisement

ಅನೇಕ ಹೆಸರುಗಳುಳ್ಳ ಮಹಾದೇವನ ಮಹಿಮೆಯನ್ನು ಅರಿತ ಜ್ಞಾನಿಗಳು, ದಾಸವರೇಣ್ಯರು, ಶರಣರು, ಭಗವಂತನ ದರುಶನಕ್ಕಾಗಿ ಭಕ್ತಿಪರವಶದಿಂದ ಮಂತ್ರ, ಸಂಗೀತ, ನೃತ್ಯ, ಸಾಹಿತ್ಯ, ಸ್ತೋತ್ರ, ಸುಳಾದಿಗಳು, ವಚನಗಳು, ಉಗಾಭೋಗ ಮುಂತಾದವುಗಳನ್ನು ರಚಿಸಿ ಭಜನೆ ಮಾಡಿ ವಾದ್ಯಗಳನ್ನು ನುಡಿಸಿ, ಮೈಮರೆತು ನರ್ತಿಸಿ, ಹಾಡಿ ಹೊಗಳಿ, ಶಿವಶಂಕರನ ಕೃಪೆಗೆ ಪಾತ್ರರಾಗಿ ದರುಶನ ಪಡೆದು ಧನ್ಯರಾಗಿ ಬದುಕನ್ನು ಸಾರ್ಥಕ ಪಡಿಸಿಕೊಂಡ ಸಾಧಕರ ಅವರ್ಣನೀಯ ಆನಂದದ ಅನುಭವವನ್ನು ನಮಗೂ ಹಂಚಿದ್ದಾರೆ. ಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ಶಿವನ ಗುಣ ರೂಪಗಳನ್ನು ಸ್ಮರಿಸಿ ಧನ್ಯರಾಗೋಣ.

ನಾರಾಯಣ ಪಂಡಿತಾಚಾರ್ಯರು ಮಹಾನ್‌ ಗ್ರಂಥಕಾರರು. ಅನೇಕ ಮಾಹಾಕಾವ್ಯಗಳನ್ನು ರಚಿಸಿ ಸಂಸ್ಕೃತ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಒಮ್ಮೆ ಇವರು ರಾಮೇಶ್ವರದಲ್ಲಿ ಶಿವನ ದರ್ಶನಕ್ಕೆಂದು ಹೋದಾಗ, ದೇವಾಲಯ ಮುಚ್ಚಿದ್ದ ಕಾರಣ ವಾಪಸ್ಸಾಗಲು ಅವರು ಸಿದ್ಧರಿರಲಿಲ್ಲ. ದೇವಾಲಯದಲ್ಲಿ ಕುಳಿತು ಶಿವನನ್ನು ಸ್ತುತಿಸಲು ಪ್ರಾರಂಭಿಸುತ್ತಾರೆ. ಇವರ ಸ್ತುತಿ ಮುಗಿಯುವ ಹೊತ್ತಿಗೆ ವಿಷಯ ತಿಳಿದ ಅರ್ಚಕರು ಬಾಗಿಲನ್ನು ತೆರೆದು ದರ್ಶನಕ್ಕೆ ವ್ಯವಸ್ಥೆ ಮಾಡುತ್ತಾರೆ.

ಭಕ್ತಿ ಪ್ರಿಯ ಶಿವನ ಕುರಿತು ಅವರು ರಚಿಸಿದ ಶಿವಸ್ತುತಿ ಇಂದಿಗೂ ಸ್ತುತ್ಯರ್ಹವಾಗಿದೆ. ಶುದ್ಧ ಸ್ಫಟಿಕ ಮಣಿಯ ಕಾಂತಿಯಿಂದ ಹೊಳೆಯುತ್ತಿರುವ ಮುಖದ ಶಿವನೇ, ನಿನ್ನ ಕೆಂಜಟೆಯ ಮೇಲೆ ಧರಿಸಿರುವ ಚಂದ್ರನಿಂದ ರಾರಾಜಿಸುವವನೇ ಸರ್ಪಭೂಷಣ, ಹೊಳೆಯುತ್ತಿರುವ ನಸುಗೆಂಪಿನ ಮೂರು ಕಣ್ಣುಳ್ಳವನೇ ವೈರಾಗ್ಯದ ಸಂಕೇತವಾಗಿ ಬೂದಿಯನ್ನು ಪೂರ್ತಿ ಬಳಿದುಕೊಂಡಿರುವ ಭಸಿತ ಭೂಷಿತನೆ, ಹುಲಿಯ ಚರ್ಮವನ್ನು ಉಟ್ಟವನೇ, ನೀಲಕಂಠನೇ ಈ ನಿನ್ನ ಸುಂದರ ರೂಪವನ್ನು ದಯಮಾಡಿ ಎನಗೆ ತೋರಿಸು ಎಂದು ಪ್ರಾರ್ಥಿಸುತ್ತಾ ಮಹಾದೇವನ ಮುಖದ ವರ್ಣನೆಯನ್ನು ಮಾಡಿದ್ದಾರೆ.

ಶಿವನ ತಂದೆ ಬ್ರಹ್ಮ. ಅವನು ಚತುರ್ಮುಖ. ಶಿವನಿಗೆ ಪಂಚಮುಖ, ಶಿವನ ಮಗ ಸುಬ್ರಹ್ಮಣ್ಯನಿಗೆ ಷಣ್ಮುಖ. ಶಿವನನ್ನು ಪಂಚಾನನ ಎಂದೂ ಕರೆಯುತ್ತಾರೆ. ಶಿವನ ಐದು ಮುಖಗಳಲ್ಲಿ ನಾಲ್ಕು ಮುಖಗಳು ನಾಲ್ಕು ದಿಕ್ಕಿಗೆ ತಿರುಗಿದೆ. ನಾಲ್ಕು ದಿಕ್ಕಿನ ಮಧ್ಯದಲ್ಲಿರುವ ಮುಖದ ಹೆಸರು ಈಶಾನ, ಶ್ಯಾಮಲ ವರ್ಣದಿಂದ ಕೂಡಿದ ಮಂದಸ್ಮಿತ ಮುಖ. ಪೂರ್ವದಿಕ್ಕಿಗಿರುವ ಮುಖ ತತ್ಪುರುಷ, ಮಿಂಚಿನಂತೆ ಹೊಳೆಯುವ ಬಣ್ಣದ ಶ್ರೇಷ್ಠ ಪುರುಷ. ಎಲ್ಲ ಜೀವರಾಶಿಗಳು ಪಶುಗಳಂತೆ, ಅದರ ಅಧಿಪತಿಯಾಗಿ ಪಶುಪತಿ ಎನಿಸಿದ್ದಾನೆ.

Advertisement

ದಕ್ಷಿಣಾಭಿಮುಖವಾಗಿರುವ ಮುಖ ಅಘೋರ, ಕಪ್ಪುಬಣ್ಣದಿಂದ ಕೂಡಿದ ಶತ್ರುಗಳಿಗೆ ಭಯವನ್ನು ಹುಟ್ಟಿಸುವ ಉಗ್ರರೂಪ. ರಿಪುವೈರಿ ದಕ್ಷಿಣಾಮೂರ್ತಿ ಭಕ್ತರಿಗೆ ಅಘೋರರೂಪಿ. ಉತ್ತರಕ್ಕೆ ವಾಮದೇವ ಸುಂದರವಾದ ಕಾಂತಿಯಿಂದ ಕೂಡಿದ ಮುಖದ ಶಿವನೇ ದುಷ್ಟರನ್ನು ನಾಶಗೊಳಿಸುವವನೇ. ಪಶ್ಚಿಮಾಭಿಮುಖದಲ್ಲಿ ಸದ್ಯೋಜಾತ ಭಕ್ತರು ಧ್ಯಾನಿಸಿದ ತತ್‌ಕ್ಷಣ ಪ್ರತ್ಯಕ್ಷವಾಗುವ ಶುಭ್ರವಾದ ಬಣ್ಣದಿಂದ ಕಂಗೊಳಿಸುವ ಪರಮೇಶ್ವರನೇ ಎಲ್ಲ ರೂಪಗಳನ್ನು ಪ್ರತ್ಯೇಕ ಮಂತ್ರಗಳಿಂದ ಉಪಾಸನೆ ಮಾಡುವವರಿಗೆ ವಿಶಿಷ್ಟ ಫ‌ಲದಾಯಕನಾಗಿ ದಯಮಾಡಿ ಗೋಚರವಾಗು ಎಂದು ಪ್ರಾರ್ಥಿಸಿ, ಅಹಂಕಾರ ತತ್ತ್ವದ ಅಭಿಮಾನಿ ದೇವತೆಯೇ ಮನೋನಿಯಾಮಕನೇ ದುಃಖಕ್ಕೆ ಮೂಲ ಕಾರಣನಾಗಿರುವ ನಾನೇ ಎಂಬ ಅಹಂಕಾರವನ್ನು ಕಡಿದೊಗೆಗೆದು, ಮನಸ್ಸನ್ನು ನಿಗ್ರಹಿಸುವ ಶಕ್ತಿ ಕರುಣಿಸು.

ಸಂಕುಚಿತ ಬುದ್ಧಿಬಿಡಿಸಿ ವಿಶಾಲಗೊಳಿಸು. ಶರದ್ವಗಳ ಜ್ಞಾನ ಕರುಣಿಸು. ಅಷ್ಟಮೂರ್ತತ್ಮಕನೇ ಪಂಚಭೂತಗಳು, ಸೂರ್ಯ, ಚಂದ್ರ ಸಾಧಕರಲ್ಲಿದ್ದು ಜಗತ್ತನ್ನು ಪ್ರಶಾಂತವಾಗಿ ಉದ್ಧರಿಸುತ್ತಿರುವೆ. ಓ ಮಂಗಲಕರನೆ ದೇವಿ ಪಾರ್ವತೀ, ಅಷ್ಟದಿಕ್ಪಾಲಕರು, ಬೃಹಸ್ಪತ್ಯಾಚಾರ್ಯರು, ಸ್ಕಂದ, ರಾಜಸರು, ತಾಮಸರು, ಮನುಜರು, ಸಮಸ್ತ ದೇವತೆಗಳು ನಿನ್ನಾರಾಧನೆಯಿಂದ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ. ಹೇ ಶಿವನೇ, ನಟರಾಜನೇ, ನಿನ್ನ ನಾಟ್ಯ ಅತ್ಯಂತ ಅದ್ಭುತ, ಅಗಣಿತವಾದ ನಿನ್ನ ಕೈಗಳಲ್ಲಿ ಕೊಡಲಿ, ಸುಂದರವಾದ ತ್ರಿಶೂಲ, ಢಮ ಢಮ ಶಬ್ದ ಮಾಡುತ್ತಿರುವ ಢಮರುಗ, ಹೊಳೆಯುತ್ತಿರುವ ಜಿಂಕೆ,ಅಭಯ ಮುದ್ರೆ, ಖಟ್ವಂಗ ಧರಿಸಿದ ಕೈಗಳಿಂದ ಭಾವ ಪ್ರದರ್ಶಿಸುತ್ತಾ ಕಡಗದ ಕಾಲುಗಳಿಂದ ತಾಳ ಹಾಕಿ ನರ್ತಿಸುತ್ತಿರುವ ನಿನ್ನ ನಾಟ್ಯವನ್ನು ತನ್ಮಯತೆಯಿಂದ ವೀಕ್ಷಿಸುತ್ತಿರುವ ತ್ರಿಲೋಕ ದೇವತಾಗಣ ಪರವಶರಾಗಿ ಧನ್ಯವಾಯಿತೆಂದು ಸಂತೋಷದಿಂದ ಹಾಡಿಹೊಗಳುತ್ತಾರೆ.

ನಿನ್ನದರುಶನದಿಂದ ಹರುಷಗೊಂಡಿರುವೆ ಶಿವ ಶಿವಾ ನಿನಗಿದೋ ನನ್ನ ನಮಸ್ಕಾರ ಎಂದು ನಾರಾಯಣ ಪಂಡಿತಾಚಾರ್ಯರು ಶಿವಸ್ತುತಿಯನ್ನು ರಚಿಸಿ ಸಮರ್ಪಿಸಿದ್ದಾರೆ. ಹರಿದಾಸರು ಹರನನ್ನು ಪ್ರತ್ಯಕ್ಷ ಕಂಡು ತನ್ಮಯರಾಗಿ ಹಾಡಿ ಹೊಗಳಿ ತಮ್ಮ ಕೀರ್ತನೆಗಳ ಮೂಲಕ ಕೋರಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದ್ದಾರೆ. ಹೇ ಉಗ್ರತಪನೆ ವಿರೂಪಾಕ್ಷ ನಿನ್ನ ಅನುಗ್ರಹ ದಿಂದ ಭೂಮಿಯ ಮೇಲೆ ಜನಿಸಿರುವ ನಮ್ಮನ್ನು ಪರಿಗ್ರಹಿಸಿ ಇಂದ್ರಿಯಗಳನ್ನು ನಿಗ್ರಹಿಸುವ ಶಕ್ತಿಯನ್ನು ಕರುಣಿಸು. ಮನೋನಿಯಾಮಕನಾದ ಶಂಕರನೇ ಪ್ರಧಾನ ಅಂಗವಾದ ಮನಸ್ಸಿನಲ್ಲಿ ಕವಿದಿರುವ ಕತ್ತಲೆಯನ್ನು ಓಡಿಸಿ ಅಹಂಕಾರವನ್ನು ತುಳಿದು ಸುಜ್ಞಾನವಿತ್ತು ಭಗವಂತನ ಮೆಚ್ಚುಗೆಗೆ ಪಾತ್ರವಾಗುವ ಕಾರ್ಯಗಳನ್ನು ಮಾಡಲು ಮನಸ್ಸನ್ನು ಅನುಗೊಳಿಸು.

ವೈರಾಗ್ಯ ನಿಧಿಯೇ ಪ್ರಾಪಂಚಿಕ ಸುಖಗಳಿಗೆ ಸೋಲದಂತೆ ಮಾಡು. ಗಂಗಾಧರನೆ ಗೌರಿಪ್ರಿಯನೇ ನಿನ್ನಲ್ಲಿ ಸದಾಭಕ್ತಿ ಮಾಡುವ ಚಿತ್ತಕೋಡು ಶಂಭೋ, ನಿನಗೆ ಶರಣಾಗಿದ್ದೇನೆ ಶ್ರೀಹರಿಯನ್ನು ತೋರಿಸು. ಮೃತ್ಯುಂಜಯನೇ ಭಕ್ತರ ಅಪಮೃತ್ಯು ಪರಿಹರಿಸಿ ಸಂಪತ್ತು ಪಾಲಿಸು. ದಾಸರಾಯರು ಮತ್ತೂಂದು ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಹರಿಹರರ ಮಧ್ಯೆ ಮಿತ್ರತ್ವವಿದೆ. ಅಜ್ಜಮೊಮ್ಮೊಗನ ವಾತ್ಸಲ್ಯವಿದೆ. ಸರಿಯಾದ ತಿಳುವಳಿಗೆ ಇಲ್ಲದವರು ಹರಿಹರರು ಪರಸ್ಪರ ವಿರೋಧಿಗಳೆಂಬಂತೆ ಪ್ರತಿಪಾದಿಸುತ್ತಾರೆ. ಎಂದಿಗೂ ಸಲ್ಲದ ಹೇಳಿಗೆ. ಶಿವನ ಪ್ರೀತಿಪಾತ್ರರೇ ವಿಷ್ಣುವಿನ ಪ್ರೀತಿಪಾತ್ರರು. ವಿಷ್ಣುವಿನ ದ್ವೇಷಿಗಳೂ ಶಿವನಿಗೂ ದ್ವೇಷಿಗಳೇ ಎನ್ನುವುದಕ್ಕೆ ಒಂದು ಉದಾಹರಣೆ. ಹರಿಹರರು ಸಮವೆಂದರಿಯೆದ ಜ್ಞಾನಿಗಳು ಹರನ ಹೃದಯದೊಳಿರುವ ಹರಿಯ ತಾವರಿಯರು.

ಕ್ಷೋಣಿಯೊಳಗೆ ಬಾಣನು ತೋಳುಗಳು ಕಡಿದಾಗ ಏಣಾಂಕಧರ ಬಾಗಿಲೊಳಗೆ ಇರಲು ಕಾಣಿಪರೆ ಜನರೆಲ್ಲ ಹರಿಹರನು ತಾನೆಂದು ಗುಣಪೂರ್ಣ ಪುರಂದರ ವಿಟಲನು ಪರನು. ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅಪಾರ. ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಗನ್ನಡದಲ್ಲಿ ಶಿವಶರಣರಿಂದ ರಚನೆಯಾಗಿರುವ ವಚನಗಳು ಸಮಾಜಕ್ಕೆ ಹಿತವಚನಗಳ ಕೈಪಿಡಿಯಂತಿದೆ. ಶಿವಭಕ್ತರ ನಡೆನುಡಿ, ಆಚಾರ, ವಿಚಾರಗಳು ಹೇಗಿರಬೇಕು ಎಂಬುದನ್ನು ತಿಳಿಸುತ್ತದೆ. ಎಲ್ಲರನ್ನು ಎಲ್ಲೆಲ್ಲೂ ಕೂಡಲ ಸಂಗಮನನ್ನು ಕಂಡು ಭಕ್ತಿ ಭಂಡಾರಿ ಎಂದೇ ಪ್ರಸಿದ್ಧಿ ಹೊಂದಿದ ಬಸವಣ್ಣನವರು.

ಮತ್ತೊಬ್ಬ ಶಿವಶರಣೆ ಅಕ್ಕಮಹಾದೇವಿ, ಉಡುತಡಿಯ ಮಹಾರಾಜನ ಸಿಂಹಾಸನದಲ್ಲಿ ಮಹಾರಾಣಿಯಾಗಿ ಶೋಭಿಸಬೇಕಾಗಿದ್ದ ಅಕ್ಕಮಹಾದೇವಿ! ಲೌಕಿಕ ಸುಖ ಸಂತೋಷಕ್ಕೆ ಮಾರು ಹೋಗದೆ ಚೆನ್ನಮಲ್ಲಿಕಾರ್ಜುನನ್ನೇ ತನ್ನ ಪತಿ ಎಂದು ಎಲ್ಲ ಬಂಧನಗಳನ್ನು ಕಿತ್ತೂಗೆದು ನಶಿಸುವ ಈ ಕಾಯಕ್ಕೆ ಶೃಂಗಾರವೇಕೆ ಎಂದು ಮೈಮೇಲಿದ್ದ ವಸ್ತ್ರಗಳನ್ನು ತ್ಯಜಿಸಿ ಚೆನ್ನಮಲ್ಲಿಕಾರ್ಜುನನ ಕರುಣಾ ಕವಚವನ್ನೇ ಧರಿಸಿ, ಭವ ಭಯ ಎರಡೂ ಇಲ್ಲದ ಶಿವನನ್ನು ಒಲಿಸಿ ಶರಣರ ಸಾಲಿನಲ್ಲಿ ಬೆರೆತವಳು. ಕರುಣಾಮಯ ಶಿವ ಎಲ್ಲರ ಮೆಚ್ಚಿನ ದೈವ. ಜಾನಪದ ಸಾಹಿತ್ಯದಲ್ಲೂ ಅಗ್ರಸ್ಥಾನ ಪಡೆದಿರುವ ಪರಮೇಶ್ವರ. ಬಯಲಾಟ, ಮೇಲಾಟ, ಯಕ್ಷಗಾನ , ಶಿಲ್ಪಕಲೆ, ಚಿತ್ರಕಲೆ, ಗಾನ, ಕಂಸಾಳೆ ಪದ, ನಾಟಕ, ಸಿನೆಮಾ, ಹೀಗೆ ಎಲ್ಲ ಪ್ರಾಕಾರದ ಕಲೆಗಳಲ್ಲೂ ಪಾರ್ವತಿ ಪರಮೇಶ್ವರರ ಲೀಲಾ ವಿನೋದಗಳನ್ನು ಮಹಿಮಗೆಳನ್ನು ಹಾಡಿ ನರ್ತಿಸಿ ನಟಿಸಿ ವಾದ್ಯಗಳನ್ನು ನುಡಿಸಿ ಖುಷಿಪಡುತ್ತಾರೆ. ಭಕ್ತಿಯಿಂದ ಭಜಿಸುವ ಭಜಕರಿಗೆ ಶೀಘ್ರ ವರ ನೀಡುವ ಮಹಾದೇವ ಮಂಗಲವನ್ನುಂಟುಮಾಡಲಿ.

*ಸಾವಿತ್ರಿ ರಾವ್‌, ಕ್ಲೀವ್‌ಲ್ಯಾಂಡ್‌

Advertisement

Udayavani is now on Telegram. Click here to join our channel and stay updated with the latest news.

Next