Advertisement

ಮುಖ್ಯ ರಸ್ತೆ ಗದ್ದಲ; ಬ್ಯಾಡಗಿ ಪೂರ್ಣ ಸ್ತಬ್ದ

03:45 PM Jun 28, 2022 | Team Udayavani |

ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ (ಗಜೇಂದ್ರಗಡ-ಸೊರಬ ರಾಜ್ಯಹೆದ್ದಾರಿ -136) ಅಗಲೀಕರಣಕ್ಕೆ ವಿರೋಧ ಹಾಗೂ ವಿಳಂಬ ಖಂಡಿಸಿ ವರ್ತಕರ ಸಂಘ, ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆ ಬೆಂಬಲದೊಂದಿಗೆ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್‌ ಸಂಪೂರ್ಣ ಯಶಸ್ವಿಗೊಂಡಿತು.

Advertisement

ವಿವಿಧ ವಾದ್ಯಗಳೊಂದಿಗೆ ಹಳೇಪುರಸಭೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಕಿತ್ತೂರು ಚೆನ್ನಮ್ಮ ಸರ್ಕಲ್‌ (ಸುಭಾಸ್‌ ಸರ್ಕಲ್‌) ತಲುಪಿದರು. ಈ ವೇಳೆ ಅಗಲೀಕರಣ ವಿರೋಧಿಸುತ್ತಿರುವ ಜನರ ವಿರುದ್ಧ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವನೆ-ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿದರು.

ವ್ಯಾಪಾರ ವಹಿವಾಟು ಸ್ಥಗಿತ: ಸದಾ ಜನರಿಂದ ತುಂಬಿರುತ್ತಿದ್ದ ಪಟ್ಟಣದ ಮುಖ್ಯರಸ್ತೆ, ಕಾಕೋಳ ರಸ್ತೆ ಸ್ಟೇಶನ್‌ ರೋಡ್‌, ಕದರಮಂಡಲಗಿ ರಸ್ತೆ, ಹಂಸಭಾವಿ ರಸ್ತೆ, ಗುಮ್ಮನಹಳ್ಳಿ ರೋಡ್‌ ಹಾಗೂ ಮಲ್ಲೂರ ಸೇರಿದಂತೆ ಬಸ್‌ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಇನ್ನಿತರ ಕಡೆಗಳಲ್ಲಿ ಬಂದ್‌ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.

ಬಸ್‌, ಟೆಂಪೊ, ಆಟೋರಿಕ್ಷಾ ಸೇರಿದಂತೆ ಯಾವುದೇ ವಾಹನಗಳು ರಸ್ತೆಗಿಳಿಯಲಿಲ್ಲ. ಸದಾ ಜನರಿಂದ ಗಿಜಿಗುಡುತ್ತಿದ್ದ ಬಸ್‌ನಿಲ್ದಾಣ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಟೆಂಪೋ ಮತ್ತು ಆಟೊ ಮಾಲೀಕರು-ಚಾಲಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಯಾವುದೇ ವಾಹನಗಳು ಸಂಚರಿಸಲಿಲ್ಲ. ಪರಸ್ಥಳಗಳಿಗೆ ತೆರಳುವ ಅದರಲ್ಲೂ ಗ್ರಾಮೀಣ ಪ್ರದೇಶದ ಪ್ರಯಾಣಿಕರು ಪರದಾಡಬೇಕಾಯಿತು.

ಸುಗಮವಾಗಿ ನಡೆದ ಪರೀಕ್ಷೆ: ಸೋಮವಾರವೇ ಎಸ್ಸೆಸ್ಸಲ್ಸಿ ಪೂರಕ ಪರೀಕ್ಷೆ ನಿಗದಿಯಾಗಿತ್ತು. ಬಂದ್‌ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿತ್ತು. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶದಂತೆ ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರೇ ಮುತುವರ್ಜಿ ವಹಿಸಿ ವಿದ್ಯಾರ್ಥಿಗಳನ್ನು ಎಸ್‌ ಜೆಜೆಎಂ ಕೆಪಿಎಸ್‌ ಶಾಲೆಯಲ್ಲಿನ ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದರು.

Advertisement

ಸೂಕ್ತ ಬಂದೋಬಸ್ತ್: ಡಿವೈಎಸ್‌ಪಿ ಟಿ.ವಿ. ಸುರೇಶ್‌, ಸಿಪಿಐ ಬಸವರಾಜಪ್ಪ ಮತ್ತು ಪಿಎಸ್‌ಐ ಮಂಜುನಾಥ ಕುಪ್ಪೇಲೂರ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. 3 ಸಿಪಿಐ, 8 ಪಿಎಸ್‌ಐ, 13 ಎಎಸ್‌ಐ, 101 ಕಾನ್‌ಸ್ಟೆàಬಲ್‌ ಸೇರಿದಂತೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಒಂದು ತುಕಡಿ ನಿಯೋಜಿಸಲಾಗಿತ್ತು.

ಸ್ಥಗಿತಗೊಂಡ ಮಾರುಕಟ್ಟೆ: ಬಂದ್‌ ಹಿನ್ನೆಲೆಯಲ್ಲಿ ಸ್ಥಳೀಯ ಮೆಣಸಿನಕಾಯಿ ಮಾರುಕಟ್ಟೆ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ಪರ ಪ್ರಾಂತಗಳಿಂದ ಆಗಮಿಸಬೇಕಾಗಿದ್ದ ಮೆಣಸಿನಕಾಯಿ ವಾಹನಗಳು ಪಟ್ಟಣದ ಹೊರವಲಯದಲ್ಲೇ ಸ್ಥಗಿತಗೊಳಿಸಲಾಗಿತ್ತು. ಶ್ರೀ ಸಿದ್ದೇಶ್ವರ ಟಾಟಾ ಏಸ್‌ ವಾಹನಗಳ ಮಾಲೀಕರ ಸಂಘವು ಬಂದ್‌ಗೆ ಬೆಂಬಲ ಸೂಚಿಸಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಸುಮಾರು 200ಕ್ಕೂ ಹೆಚ್ಚು ಟಾಟಾ ಏಸ್‌ಗಳ ಪರೇಡ್‌ ನಡೆಸಲಾಯಿತು.

ಸ್ಥಳಕ್ಕೆ ಬಾರದ ಹಿರಿಯ ಅಧಿಕಾರಿಗಳು: ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಅವರ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿಗಳು ಆಗಮಿಸುವ ನಿರೀಕ್ಷೆಯಿತ್ತು. ಆದರೆ ತಹಶೀಲ್ದಾರ್‌ ತಿಪ್ಪೇಸ್ವಾಮಿ ಅವರನ್ನು ಕಳುಹಿಸಿ ಮನವಿ ಪಡೆದು ಕೈತೊಳೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next