ತುರುವೇಕೆರೆ: ಕಾಂಗ್ರೆಸ್ ನ ಭಾರತ್ ಜೋಡೊ ಯಾತ್ರೆಯು ಇಂದು ತುಮಕೂರು ಜಿಲ್ಲೆಯಲ್ಲಿ ಸಾಗಿತು. ಭಾರತ ಜೋಡೋ ಯಾತ್ರೆಯ ಪ್ರಮುಖ ಉದ್ದೇಶ ಭಾರತವನ್ನು ಒಂದುಗೂಡಿಸುವುದೇ ಹೊರತು, 2024ರ ಚುನಾವಣೆ ನಮ್ಮ ಗುರಿಯಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ಹಿಂಸಾಚಾರ, ದ್ವೇಷದಿಂದ ಮಾನಸಿಕವಾಗಿ ವಿಭಜನೆಯಾಗುತ್ತಿರುವ ಭಾರತವನ್ನು ಒಗ್ಗೂಡಿಸುವುದು ನಮ್ಮ ಉದ್ದೇಶ. ಆರ್ಥಿಕ ಅಸಮಾನತೆ ಮೂಲಕ ಕೆಲವರು ದೇಶದ ಶ್ರೀಮಂತರಾದರೆ, ಬಹುತೇಕರು ಬಡವರಾಗುತ್ತಿರುವುದರ ವಿರುದ್ಧ ನಮ್ಮ ಯಾತ್ರೆ. ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಕುಸಿಯುತ್ತಿದ್ದು, ಕೆಲ ಉದ್ಯಮಿಗಳ ಬಳಿ ದೇಶದ ಸಂಪತ್ತು ಸೇರುತ್ತಿದೆ. ಆರ್ಥಿಕ ಕುಸಿತ ಹಾಗೂ ನಿರುದ್ಯೋಗ ಹೆಚ್ಚಾಗುತ್ತಿದೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ದುಸ್ಥರವಾಗಿದ್ದು, ಜನಸಾಮಾನ್ಯರ ಗಂಭೀರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದು ಈ ಯಾತ್ರೆಯ ಪ್ರಮುಖ ಉದ್ದೇಶ ಎಂದರು.
ಇದನ್ನೂ ಓದಿ:ವಿಮರ್ಶೆಗಳಷ್ಟೇ ಚಿತ್ರ ಚೆನ್ನಾಗಿರಲೆಂದು ನೋಡಲು ಕುಳಿತೆ,ಆದರೆ :ಕಾಂತಾರದ ಬಗ್ಗೆ ಕಿಚ್ಚನ ಮಾತು
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಗೌರವ ನೀಡದೇ ಕಡೆಗಣಿಸಲಾಗುತ್ತಿದೆ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾನು ಸಂಸತ್ತಿನ ಭಾಷಣದಲ್ಲಿ ಭಾರತವನ್ನು ಸಂವಿಧಾನಿಕ ರಾಜ್ಯಗಳ ಒಕ್ಕೂಟ ದೇಶ ಎಂದು ಹೇಳಿದ್ದೆ. ನಮ್ಮ ದೇಶದ ಎಲ್ಲ ಭಾಷೆ. ರಾಜ್ಯಗಳು, ಸಂಪ್ರದಾಯಗಳು ಸಮಾನ ಪ್ರಾಮುಖ್ಯತೆ ಹೊಂದಿದ್ದು, ಎಲ್ಲರಿಗೂ ಸಮಾನ ಪ್ರಾಧಾನ್ಯತೆ ಸಿಗಬೇಕು’ ಎಂದರು.
ಪಿಎಫ್ಐ ನಿಷೇಧ ಹಾಗೂ ಪಿಎಫ್ ಐಗೆ ಪ್ರೋತ್ಸಾಹ ನೀಡಿದ್ದೆ ಕಾಂಗ್ರೆಸ್ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ದೇಶದಲ್ಲಿ ಯಾರೇ ದ್ವೇಷ ಹಬ್ಬಿಸಿ ಅಶಾಂತಿ ಸೃಷ್ಟಿಸಿದರೂ ಅವರು ಯಾವುದೇ ಸಮುದಾಯದವರಾದರೂ ಅವರನ್ನು ನಾವು ವಿರೋಧಿಸುತ್ತೇವೆ ಎಂದು ರಾಹುಲ್ ತಿಳಿಸಿದರು.