ಕಡೂರು: ಗಡಿಯಲ್ಲಿ ಗುಂಡು ಹಾರಿದವೋ…ಹುಟ್ಟಿದ ಕಂದ ಕಷ್ಟಪಟ್ಟು ಸುಖ ಪಟ್ಟಿತಲೇ! ಪರಾಕ್…. ಇದು ತಾಲೂಕಿನ ಜಿಗಣೆಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ಮಹೋತ್ಸವದಲ್ಲಿ ಗಣಮಗ ಹೇಳಿದ ಅಣಿ ಮುತ್ತುಗಳು.
ಭಾರತ್ ಹುಣ್ಣಿಮೆ ಪ್ರಯುಕ್ತ ಜಿಗಣೆಹಳ್ಳಿ ಗ್ರಾಮದ ವೇದಾನದಿಯ ತಟದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆದು ಜಾತ್ರೆಯ ಅಂತಿಮ ಕಾರ್ಯಕ್ರಮದ ಭಾಗವಾಗಿ ಗಣಮಗ ವೇಷಧಾರಿ ಮಂಜುನಾಥ್ ಅವರ ಬಾಯಿಂದ ಈ ಮೇಲಿನಂತೆ ಕಾರ್ಣಿಕ ಉದ್ಘೋಷವಾಯಿತು.
ಗ್ರಾಮದ ಹಿರಿಯ ಮುಖಂಡ ನಿಂಗಪ್ಪ ಅವರ ಪ್ರಕಾರ ಈ ಕಾರ್ಣಿಕವು ದೇಶದ ಗಡಿಯಲ್ಲಿ ಯುದ್ಧ ಭೀತಿ ಮತ್ತು ದೇಶದ ಪ್ರಮುಖ ನಾಯಕರ ಭವಿಷ್ಯವನ್ನು ಸೂಚಿಸುತ್ತದೆ. ನಂತರ ಕಂದ ಕಷ್ಟಪಡುವ ವಿಚಾರಕ್ಕೆ ಬಂದರೆ ಜನರು ಆಥವಾ ಬೆಳೆಯುವ ಬೆಳೆ ಆರಂಭದಲ್ಲಿ ಕಷ್ಟ-ನಷ್ಟ ಅನುಭವಿಸಿದರು. ನಂತರ ಸುಖವನ್ನು ಅನುಭವಿಸುತ್ತಾರೆ ಎಂದರ್ಥ ವಿಶ್ಲೇಷಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಗಣಮಗ 5 ದಿನಗಳ ಕಾಲ ಉಪವಾಸ ಇದ್ದು ದೇವರ ವ್ರತ ಆಚರಣೆಯಲ್ಲಿ ತೊಡಗಿಕೊಂಡಿದ್ದರು. ವೇದಾನದಿಯ ತಟದಲ್ಲಿ ಶ್ರೀ ಚಿಕ್ಕಮ್ಮ, ಆಂಜನೇಯ ಸ್ವಾಮಿ ಮತ್ತು ಶ್ರೀ ಮೈಲಾರಸ್ವಾಮಿಯವರನ್ನು ಶನಿವಾರ ಬೆಳಗ್ಗೆ ನದಿ ತೀರಕ್ಕೆ ಕೆರೆತಂದು ಹೊಳೆಪೂಜೆ, ರುದ್ರಾಭಿಷೇಕ, ನಡೆಸಿ ನಂತರ ವಗ್ಗಯ್ಯಗಳ ಆಯ್ಕೆ, ಒಪ್ಪತ್ತಿನವರ ಆಯ್ಕೆ, ದೋಣಿಸೇವೆ ನಂತರ ಕಾರ್ಣಿಕನಡೆಸಲಾಯಿತು. ರಾತ್ರಿ ಗ್ರಾಮದಲ್ಲಿ ದೇವರುಗಳ ಮೆರವಣಿಗೆ ಕಾರ್ಯಕ್ರಮ ನಡೆಸಲಾಯಿತು. ಜಿಗಣೆಹಳ್ಳಿ ದೇವಾಲಯ ಸಮಿತಿಯ ಸದಸ್ಯರು,ಗುಡಿಗೌಡರು ಯರೇಹಳ್ಳಿ ನೀಲಕಂಠಪ್ಪ, ಕುರುಬಗೆರೆ ಮಹೇಶ್ ಇತರರಿದ್ದರು.