Advertisement

ವಿಜಯ್‌ ಹಜಾರೆ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ

11:46 AM Oct 08, 2018 | Team Udayavani |

ನಡಿಯಡ್‌ (ಗುಜರಾತ್‌): ಉತ್ತರಾಖಂಡದ ಆರಂಭಕಾರ ಕರ್ಣ್ವೀರ್‌ ಕೌಶಲ್‌ “ವಿಜಯ್‌ ಹಜಾರೆ’ ಏಕದಿನ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿಕ್ಕಿಂ ವಿರುದ್ಧ ಶನಿವಾರ ನಡೆದ “ಪ್ಲೇಟ್‌ ಗ್ರೂಪ್‌’ ಪಂದ್ಯದಲ್ಲಿ ಅವರು 202 ರನ್‌ ಬಾರಿಸಿ ಮೆರೆದರು. ಈ ಪಂದ್ಯವನ್ನು ಉತ್ತರಾಖಂಡ 199 ರನ್ನುಗಳಿಂದ ಜಯಿಸಿತು.

Advertisement

ಕೌಶಲ್‌ 135 ಎಸೆತಗಳಿಂದ ಈ ಬ್ಯಾಟಿಂಗ್‌ ಸಾಹಸ ಪ್ರದರ್ಶಿಸಿದರು. ಈ ಸಂದರ್ಭ 18 ಬೌಂಡರಿ ಹಾಗೂ 9 ಸಿಕ್ಸರ್‌ಗಳು ಸಿಡಿದವು. ಇದರೊಂದಿಗೆ ಮುಂಬಯಿ ಪರ ಅಜಿಂಕ್ಯ ರಹಾನೆ ಬಾರಿಸಿದ 187 ರನ್ನುಗಳ ದಾಖಲೆ ಪತನಗೊಂಡಿತು. ಅವರು 2007-08ರ ಋತುವಿನಲ್ಲಿ ಮಹಾರಾಷ್ಟ್ರ ವಿರುದ್ಧ ಈ ಸಾಧನೆಗೈದಿದ್ದರು.

7 ಪಂದ್ಯಗಳಿಂದ 3 ಶತಕ
“ನಾನು ದ್ವಿಶತಕದ ನಿರೀಕ್ಷೆಯಲ್ಲೇ ಇರಲಿಲ್ಲ. ಕೇವಲ 30 ರನ್‌ ಅಗತ್ಯವಿದ್ದಾಗ ನಾನು ಇದನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಮೂಡಿತು. ಪೂರ್ತಿಗೊಂಡಾಗ ಬಹಳ ಖುಷಿಯಾಯಿತು. ಡ್ರೆಸ್ಸಿಂಗ್‌ ರೂಮಿಗೆ ಬಂದ ಬಳಿಕವೇ ಇದು ದಾಖಲೆ ಎಂಬುದು ನನಗೆ ತಿಳಿಯಿತು’ ಎಂದು 27ರ ಹರೆಯದ ಕೌಶಲ್‌ ಹೇಳಿದರು. ಇದೇ ಕೂಟದಲ್ಲಿ ಬಿಹಾರ್‌ ವಿರುದ್ಧ ಪದಾರ್ಪಣೆ ಮಾಡಿದ ಕೌಶಲ್‌, ಈಗಾಗಲೇ 7 ಪಂದ್ಯಗಳಿಂದ 3 ಶತಕ ಬಾರಿಸಿದ್ದಾರೆ.

ಕೌಶಲ್‌ ತಮ್ಮ ಜತೆಗಾರ ವಿನೀತ್‌ ಸಕ್ಸೇನಾ ಜತೆಗೂಡಿ ಮೊದಲ ವಿಕೆಟಿಗೆ 296 ರನ್‌ ಪೇರಿಸಿದರು. ಈ ಸಂದರ್ಭದಲ್ಲಿ ದಿಲ್ಲಿ ಆರಂಭಿಕರಾದ ಶಿಖರ್‌ ಧವನ್‌-ಆಕಾಶ್‌ ಚೋಪ್ರಾ ಅವರ 277 ರನ್ನುಗಳ ಜತೆಯಾಟದ ದಾಖಲೆ ಪತನಗೊಂಡಿತು. ಇವರು 2007-08ರಲ್ಲಿ ಪಂಜಾಬ್‌ ವಿರುದ್ಧ ಈ ಸಾಧನೆಗೈದಿದ್ದರು. ವಿನೀತ್‌ ಸಕ್ಸೇನಾ ಗಳಿಕೆ 100 ರನ್‌. ಉತ್ತರಾಖಂಡ ಎರಡೇ ವಿಕೆಟಿಗೆ 366 ರನ್‌ ಪೇರಿಸಿದರೆ, ಸಿಕ್ಕಿಮ್‌ 6ಕ್ಕೆ 167 ರನ್‌ ಗಳಿಸಿ ಶರಣಾಯಿತು.

Advertisement

Udayavani is now on Telegram. Click here to join our channel and stay updated with the latest news.

Next