ತಿಂಗಳ ಆರಂಭದಲ್ಲಿ ತೆರೆಕಂಡಿರುವ “ಮಹಿಷಾಸುರ’ ಚಿತ್ರ 25 ದಿನಗಳನ್ನು ದಾಟಿ ಮುನ್ನುಗ್ಗುತ್ತಿದೆ. ಈ ಮೂಲಕ ಹೊಸಬರ ತಂಡ ಖುಷಿಯಾಗಿದೆ. ತ್ರಿಕೋನ ಪ್ರೇಮಕಥಾಹಂದರ ಹೊಂದಿರುವ “ಮಹಿಷಾಸುರ’ ಚಿತ್ರದಲ್ಲಿ ರಾಜ್ ಮಂಜು, ಸುದರ್ಶನ್ ನಾಯಕರಾಗಿ, ಬಿಂದುಶ್ರೀ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಸಂಜಯ್ ಕುಲಕರ್ಣಿ, ವಿಜಯಕುಮಾರ್ ಸೇರಿದಂತೆ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವವಿರುವ ಉದಯ ಪ್ರಸನ್ನ ಮೊದಲ ಬಾರಿಗೆ “ಮಹಿಷಾಸುರ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ – ಕಟ್ ಹೇಳಿದ್ದಾರೆ.
“ಮಹಿಷಾಸುರ’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಉದಯ್ ಪ್ರಸನ್ನ, “ಸಮಾಜಕ್ಕೆ ಒಂದು ಉತ್ತಮ ಸಂದೇಶ ಈ ಸಿನಿಮಾದಲ್ಲಿದೆ. ಮನುಷ್ಯ ಎಷ್ಟೇ ಒಳ್ಳೆಯವನಾಗಿದ್ದರೂ ಆತ ತಾಳ್ಮೆ, ಸಹನೆ ಕಳೆದುಕೊಂಡರೆ, ಅವನ ಅಂತರಂಗದಲ್ಲಿರುವ ಅಸುರ “ಮಹಿಷಾಸುರ’ನ ರೂಪ ತಾಳುತ್ತಾನೆ. ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಕಣ್ಣಾರೆ ಕಂಡ ನೈಜಘಟನೆಯನ್ನು ಪ್ರೇರಣೆಯಾಗಿಟ್ಟುಕೊಂಡ ಈ ಸಿನಿಮಾ ಮಾಡಲಾಗಿದೆ.
ಇದನ್ನೂ ಓದಿ: ಸುದೀಪ್ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ
ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದ ಯುವಕರಿಬ್ಬರು ಜಾತಿ ವೈಷಮ್ಯದಿಂದ ಹೇಗೆ ಅಸುರ ರೂಪ ತಾಳುತ್ತಾರೆ ಅನ್ನೋದು ಕಥೆಯ ಒಂದೆಳೆ. ಈಗ ಜನ ಕೂಡಾ ಚಿತ್ರವನ್ನು ಇಷ್ಟಪಟ್ಟು ನೋಡುತ್ತಿದ್ದಾರೆ’ ಎನ್ನುತ್ತಾರೆ.
ಇನ್ನು “ಮೇಲುಕೋಟೆ ಟೂರಿಂಗ್ ಟಾಕೀಸ್’ ಬ್ಯಾನರ್‌ನಲ್ಲಿ ಶ್ರೀಮತಿ ಪಾರ್ವತಿ ಚಂದ್ರಶೇಖರ್, ಶ್ರೀಮತಿ ಲೀಲಾವತಿ ಸುರೇಶ್ ಕುಮಾರ್ ಹಾಗೂ ಪ್ರೇಮಾ ಚಂದ್ರಯ್ಯ “ಮಹಿಷಾಸುರ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸುನಿಲ್ ಕೌಶಿ ಸಂಗೀತ, ವೇಣು ಸಾಹಿತ್ಯ, ಕೃಷ್ಣ ಛಾಯಾಗ್ರಹಣವಿದೆ.