ಕನ್ನಡದಲ್ಲಿ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾಗಳು ಹೊಸದೇನಲ್ಲ. ಆದರೆ, ತಾಯಿ ಮತ್ತು ಮಗಳ ನಡುವಿನ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ ಹೊಸತು. ಹೌದು, ಅಂಥದ್ದೊಂದು ಕಥೆ ಹೊತ್ತ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆದು “ಮಹಿರ’. ಜುಲೈ 26 ರಂದು ಈ ಚಿತ್ರ ಬಿಡುಗಡೆಯಾಗುತಿದ್ದು, ಈ ಚಿತ್ರದಲ್ಲಿ ಅನೇಕ ವಿಶೇಷತೆಗಳಿವೆ.
ಈಗಾಗಲೇ ಜು.7 ರಂದು ಲಂಡನ್‌ನಲ್ಲಿ ಪ್ರೀಮಿಯರ್ ಶೋ ಆಗಿರುವ “ಮಹಿರ’, ಅಲ್ಲಿನ ಭಾರತೀಯರು ಸೇರಿದಂತೆ ಬ್ರಿಟಿಷ್ ಪ್ರೇಕ್ಷಕರಿಂದಲೂ ಒಳ್ಳೆಯ ಮೆಚ್ಚುಗೆ ಪಡೆದಿದೆ. “ಮಹಿರ’ ಕುರಿತು ಇನ್ನೊಂದು ವಿಷಯ ಹೇಳುವುದಾದರೆ, ಇದೇ ಮೊದಲ ಬಾರಿಗೆ ರೆಡ್ ಕಾರ್ಪೆಟ್‌ನಲ್ಲಿ ಈವೆಂಟ್ ನಡೆಸಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಕುರಿತು ಹೇಳುವ ನಿರ್ದೇಶಕ ಮಹೇಶ್‌ಗೌಡ, “ಲಂಡನ್‌ನ ಪ್ರಸಿದ್ಧ ಅರೇನಾದಲ್ಲಿರುವ ಸಿನಿವರ್ಲ್ಡ್ನಲ್ಲಿ “ಮಹಿರ’ ಪೂರ್ವಭಾವಿ ಪ್ರದರ್ಶನ ನಡೆದಿದೆ. ಚಿತ್ರ ನೋಡಿದ ಎಲ್ಲರಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು ವಿಶೇಷ. ಲಂಡನ್‌ನಲ್ಲಿ ಭಾನುವಾರ ಬೆಳಗ್ಗೆ 10.30 ಕ್ಕೆ ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಾರು ನೂರಾರು ಕಿಲೋಮೀಟರ್ ದೂರದಿಂದ ಆ ಟೈಮ್‌ಗೆ ಬರಬೇಕಿತ್ತು.
ಎಲ್ಲರೂ ಟೈಮ್ ಸರಿಯಾಗಿ ಬಂದು ಸಿನಿಮಾ ನೋಡಿದ್ದಾರೆ. ಹೊಸ ವಿಷಯವೆಂದರೆ, “ಮಹಿರ’ ಚಿತ್ರವನ್ನು ಕನ್ನಡಿಗರಷ್ಟೇ ಅಲ್ಲ, ಬೇರೆ ಬೇರೆ ರಾಜ್ಯದವರು ವೀಕ್ಷಿಸಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲಯಾಳಿ, ಬೆಂಗಾಲಿ ಭಾಷಿಗರ ಜೊತೆಯಲ್ಲಿ ಬ್ರಿಟಿಷ್ ಮಂದಿ ಕೂಡ ನೋಡಿದ್ದು ಚಿತ್ರದ ಹೆಮ್ಮೆ. ಜು.26 ರಂದು ವರ್ಲ್ಡ್ವೈಡ್ ರಿಲೀಸ್ ಆಗುತ್ತಿದೆ. ಹೆಚ್ಚು ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರ ತೆರೆಕಾಣುತ್ತಿದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಮಹೇಶ್‌ಗೌಡ.
“ಮಹಿರ’ ಚಿತ್ರದ ಟ್ರೇಲರ್ ಸೋಮವಾರ (ಇಂದು) ಸಂಜೆ 6 ಗಂಟೆಗೆ ಪಿಆರ್‌ಕೆ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಲಂಡನ್ ಸ್ಕ್ರೀನಿಂಗ್ ನಮ್ಮ ತಂಡಕ್ಕೆ ಉತ್ಸಾಹ ಹೆಚ್ಚಿಸಿದೆ. “ಮಹಿರ’ ಒಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ತಾಯಿ ಹಾಗೂ ಮಗಳ ನಡುವೆ ಕಥೆ ಸಾಗಲಿದೆ. ಸಂತಸದಲ್ಲಿರುವ ತಾಯಿ-ಮಗಳ ಮಧ್ಯೆ ಒಂದು ಘಟನೆ ನಡೆಯುತ್ತೆ.
ಅದರಿಂದ ಒಂದು ಸಮಸ್ಯೆ ಎದುರಾಗುತ್ತೆ. ಅದರಿಂದ ಹೇಗೆ ಹೊರಬರುತ್ತಾರೆ ಎಂಬುದು ಕಥೆ. ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರ ಹೈಲೈಟ್ ಆಗಿದೆ. ಸಾಕಷ್ಟು ತಿರುವುಗಳು ಚಿತ್ರದ ಕುತೂಹಲಕ್ಕೆ ಕಾರಣವಾಗುತ್ತವೆ ಎಂಬುದು ನಿರ್ದೇಶಕರ ಮಾತು. ಅಂದಹಾಗೆ, ಚಿತ್ರವನ್ನು ವಿವೇಕ್ ಕೋಡಪ್ಪ ನಿರ್ಮಿಸಿದ್ದಾರೆ. ವರ್ಜಿನಿಯ ರಾಡ್ರಿಗಸ್, ಚೈತ್ರಾ, ರಾಜ್ ಬಿ ಶೆಟ್ಟಿ , ಗೋಪಾಲ ಕೃಷ್ಣ ದೇಶಪಾಂಡೆ, ಬಾಬು ಹಿರಣ್ಣಯ್ಯ, ಅಪೂರ್ವ, ಸೋಮ ಇತರರು ನಟಿಸಿದ್ದಾರೆ.
ಚಿತ್ರಕ್ಕೆ ಚೇತನ್ ಸಾಹಸ ಸಂಯೋಜಿಸಿದ್ದು, ಮಹಿಳಾ ಪಾತ್ರಧಾರಿಗಳಿಗೆ ಫೈಟ್ ತರಬೇತಿ ಕೊಡಿಸಿ, ನೈಜ ಫೈಟ್‌ನಂತೆ ಬಿಂಬಿಸಲಾಗಿದೆ. 42 ವರ್ಷದ ತಾಯಿ ಹೇಗೆ ಫೈಟ್ ಮಾಡಬಹುದೋ ಹಾಗೆಯೇ ಇಲ್ಲಿ ಕಾಣಬಹುದು. ಇದು ಎಲ್ಲಾ ವರ್ಗಕ್ಕೂ ಸಲ್ಲುವ ಚಿತ್ರ ಎನ್ನುತ್ತಾರೆ ನಿರ್ದೇಶಕರು.