Advertisement

ವಾಣಿಜ್ಯ ವಾಹನ ಕ್ಷೇತ್ರಕ್ಕೆ ಮಹೀಂದ್ರಾದ ಹೊಸ ಕೊಡುಗೆ

06:00 AM Aug 20, 2018 | |

ಬಾಡಿಗೆ ವಾಹನ ಹೊಂದಿದ್ದೇನೆ ಎಂದು ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದ ಕಾಲವೊಂದಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಅಷ್ಟು ಸಂಕೋಚ ಪಡುವವರು ಯಾರೂ ಇಲ್ಲ. ಏಕೆಂದರೆ ಇವತ್ತು  ಚಾಲಕನಾಗಿ ದುಡಿಯಬಲ್ಲ ವೃತ್ತಿ ಕೂಡ ಗೌರವ ಮತ್ತು ಹಣವನ್ನು ತಂದುಕೊಡಬಲ್ಲ ಕಾರ್ಪೊರೇಟ್‌ ಉದ್ಯಮವಾಗಿ ಬೆಳೆದಿದೆ.

Advertisement

ಬಾಡಿಗೆಗಾಗಿ ಸ್ವಂತ ವಾಹನ ಹೊಂದಿದ್ದು, ತಿಂಗಳಿಗೆ ಕನಿಷ್ಠ 50 ಸಾವಿರಕ್ಕೂ ಹೆಚ್ಚು ದುಡಿದುಕೊಳ್ಳಬಲ್ಲ ಸಾಮರ್ಥ್ಯದ ಉದ್ಯಮವಾಗಿ ಬೆಳೆದಿದ್ದರಿಂದ ಪ್ರತಿಯೊಬ್ಬ ಚಾಲಕರನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಒಬ್ಬ ಕ್ಯಾಬ್‌ ಡ್ರೈವರ್‌ ಅವರನ್ನೂ ಡಾಕ್ಟರ್‌, ಇಂಜಿನಿಯರ್‌ ಅವರನ್ನು ನೋಡುವ ರೀತಿಯಲ್ಲೇ ಗೌರವದಿಂದ ಮಾತನಾಡಿಸುವ ಪೃವೃತ್ತಿ ಜನರಲ್ಲಿ ಬೆಳೆಯುತ್ತಿದೆ. ಈ ಬದಲಾವಣೆಯ ಪರಿಣಾಮ, ಆ ವೃತ್ತಿಯವರನ್ನೂ ಗೌರವಿಸುವಂತೆ, ವೃತ್ತಿಯ ಮೇಲೆ ಪ್ರೀತಿ-ಒಲವು ಹೆಚ್ಚುವಂತೆ ಮಾಡಿದೆ. ಅಷ್ಟೇ ಅಲ್ಲ, ಅವರೂ ಸಹ ವೃತ್ತಿಪರ ಲಕ್ಷಣಗಳನ್ನು ಅಳವಡಿಸಿಕೊಳ್ಳುವಂತೆಯೂ ಮಾಡಿದೆ.

ಇಂಥ ಸಂಗತಿಗಳನ್ನು ಬಂಡವಾಳವನ್ನಾಗಿ ಮಾಡಿಕೊಳ್ಳುವ ಆಟೋಮೊಬೈಲ್‌ ಕಂಪನಿಗಳು, ಬಾಡಿಗೆ ವಾಹನಗಳಲ್ಲಿಯೂ ದಿನದಿಂದ ದಿನಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಸಲು ಹೆಚ್ಚಿನ ಒಲವು ತೋರುತ್ತಿವೆ. ಟ್ರಕ್‌, ಪಿಕ್‌ಅಪ್‌ ವಾಹನಗಳ ಮಾರುಕಟ್ಟೆಯಲ್ಲಿ ಇಂಥ ಗೂಡ್ಸ್‌ ವಾಹನಗಳ ಬೇಡಿಕೆ ಹೆಚ್ಚಿದೆ. ಯುವಕರೂ ಇಂದು ಇಂಥ ಟ್ರಕ್‌ಗಳನ್ನೇರಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬಾಡಿಗೆ ಓಡಿಸುವುದನ್ನೇ ವೃತ್ತಿಯಾಗಿಸಿಕೊಳ್ಳುತ್ತಿದ್ದಾರೆ. ಬಾಡಿಗೆ ವಾಹನಗಳೂ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರಬೇಕು ಎಂಬ ಸಹಜ ಅಭಿಮತ ಈ ತಲೆಮಾರಿನ ವಾಹನ ಚಾಲಕರಲ್ಲಿ ಮೂಡುತ್ತಿದೆ. ಒಂದು ಹೊಸ ಟ್ರೆಂಡ್‌ ಹುಟ್ಟುಹಾಕಿದೆ.

ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಜನಪ್ರಿಯ ವಾಹನ ತಯಾರಿಕಾ ಸಂಸ್ಥೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಹೊಸ ತಲೆಮಾರಿನ ವಾಣಿಜ್ಯ ಉಪಯೋಗಿ ವಾಹನವನ್ನು ಪರಿಚಯಿಸಿದೆ. “ಫ್ಯೂರಿಯೊ’ ಮಹೀಂದ್ರಾ ಅವರ ಹೊಸ ಮಾದರಿಯ ಮಧ್ಯಮ ಶ್ರೇಣಿಯ ಟ್ರಕ್‌ ಇದಾಗಿದ್ದು, ಈ ಮೂಲಕ ಮಹೀಂದ್ರಾ ಎಲ್ಲಾ ಮಾದರಿಯ ವಾಹನ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕೆಲವೇ ಕೆಲವು ಕಂಪನಿಗಳಲ್ಲಿ ಒಂದೆನಿಸಿಕೊಂಡಿದೆ. ಎಚ್‌ಸಿವಿ ಸೆಗೆಟ್‌ಗಿಂತ ಕೊಂಚ ದೊಡ್ಡದಾದ, ಹೆಚ್ಚಿನ ಸಾಮರ್ಥ್ಯವನ್ನೂ ಹೊಂದಿರುವ ವಾಹನ ಇದಾಗಿದೆ. ಕಂಪೆನಿ ಇನ್ನೂ ಈ ವಾಹನದ ಬೆಲೆ ಎಷ್ಟೆಂದು  ತಿಳಿಸಿಲ್ಲ.

ಇಟಲಿ ಕಂಪನಿ ವಿನ್ಯಾಸ
ಇಂಥದ್ದೊಂದು ವಾಣಿಜ್ಯ ವಾಹನ ತಯಾರಿಕೆಯ ಉದ್ದೇಶದೊಂದಿಗೆ ಅಂದಾಜು 600 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಇಟಲಿಯ ಜನಪ್ರಿಯ ಕಾರು ವಿನ್ಯಾಸ ಕಂಪನಿ ಪಿನಿನ್‌ಫ‌ರಿನಾ, ಮಹೀಂದ್ರಾ ಅವರ ಫ್ಯೂರಿಯೊ ಟ್ರಕ್‌ನ ವಿನ್ಯಾಸವನ್ನೂ ಮಾಡಿದ್ದು, ಇದೀಗ ಇಂದು ಟ್ರಕ್‌ ಮಾತ್ರ ಬಿಡುಗಡೆಯಾಗಿದೆ. ಡಿಸೆಂಬರ್‌ ವೇಳೆಗೆ ಇನ್ನೊಂದು ವೇರಿಯಂಟ್‌ ಬಿಡುಗಡೆಯಾಗಲಿದೆ. ಮುಂದಿನ ವರ್ಷ ಇನ್ನೆರಡು ವೇರಿಯಂಟ್‌ಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ. ಫೆರಾರಿ, ಅಲ್ಫಾರೋಮಿಯೊ, ಫಿಯೆಟ್‌ ಮುಂದಾದ ಕಂಪನಿಗಳ ವಾಹನಗಳ ವಿನ್ಯಾಸವನ್ನೂ ಮಾಡಿದ ಹೆಗ್ಗಳಿಕೆ ಪಿನಿನ್‌ಫ‌ರಿನಾ ಕಂಪನಿಯದ್ದಾಗಿದೆ. ಕಂಪನಿಯೇ ಹೇಳಿಕೊಂಡಿರುವಂತೆ, ಫ್ಯೂರಿಯೊ ತಯಾರಿಕಾ ಹಂತದಲ್ಲಿ 500 ಮಂದಿ ಇಂಜಿನಿಯರ್‌ಗಳು, 150 ಸಹಾಯಕರು ಕಾರ್ಯನಿರ್ವಹಿಸಿದ್ದಾರೆ. ಪುಣೆ ಸಮೀಪದ ಚಾಕನ್‌ ಮೂಲದ ವ್ಯವಸ್ಥೆಯಲ್ಲಿ ಸಿದ್ಧಗೊಂಡಿದೆ. ಹೆಚ್ಚು ಕಡಿಮೆ ಇದೇ ಮಾದರಿಯ ವಾಣಿಜ್ಯ ವಾಹನಗಳನ್ನು ಟಾಟಾ ಮತ್ತು ಈಚೆರ್‌ ಕಂಪನಿಗಳು ತಯಾರಿಸಿದ್ದು, ಇದೀಗ ಮಹೀಂದ್ರಾ ಮಾರುಕಟ್ಟೆಯಲ್ಲಿ ಸವಾಲೊಡ್ಡುವುದು ಪಕ್ಕಾ.

Advertisement

ಎಂಜಿನ್‌ಗೆ ಭಲೇ ಸಾಮರ್ಥ್ಯ
ಟ್ರಕ್‌ ಎಂದಮೇಲೆ ಹುಡುಗಾಟವಾ? ಟನ್‌ಗಟ್ಟಲೇ ಭಾರವನ್ನು ಹೊತ್ತೂಯ್ಯಲೇ ಬೇಕಾಗಿದ್ದರಿಂದ ಕಂಪನಿ ಗುಣಮಟ್ಟದ ಹಾಗೂ ಎಂಥದೇ ಭಾರವನ್ನೂ ಎಳೆದೊಯ್ಯುವ, ಒತ್ತಡವನ್ನು ನಿಯಂತ್ರಿಸುವ ಇಂಜಿನ್‌ ಬಳಸಿದೆ. ಎಂಡಿಐ ಟೆಕ್‌ ಡೀಸೆಲ್‌ ಇಂಜಿನ್‌ 138 ಬಿಎಚ್‌ಪಿ, 500ಎನ್‌ಎಂ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆಫ್ ರೋಡ್‌ ಘಟ್ಟ ಪ್ರದೇಶದಲ್ಲೂ ಸಲೀಸಾಗಿ ಜಗ್ಗಬಲ್ಲ ಸಾಮರ್ಥ್ಯ ಈ ವಾಹನದ್ದಾಗಿದೆ. ಇಂಧನ ಬಳಕೆಯ ಪ್ರಮಾಣ ಬದಲಾಯಿಸಿಕೊಳ್ಳುವ ಆಪ್ಶನ್‌ಗಳನ್ನೂ ನೀಡಲಾಗಿದ್ದು, ಇದು ಮಹೀಂದ್ರಾ ಅವರ ತಂತ್ರಜ್ಞಾನ ಬಳಕೆಯ ವಿಶೇಷ ಎನ್ನಬಹುದು.

17 ಸಾವಿರ ಕಿ.ಮೀ. ಪರೀಕ್ಷಾರ್ಥ ಚಾಲನೆ
ಭಾರತದ ರಸ್ತೆಗೆ ಅನುಗುಣವಾಗಿ ತಯಾರಿಸಲಾದ ಈ ವಾಹನವನ್ನು ಭಾರತದ ಬೇರೆ ಬೇರೆ ಭಾಗಗಳಲ್ಲಿ ಪರೀಕ್ಷಾರ್ಥ ಓಡಾಟ ನಡೆಸಲಾಗಿದೆ. ಸಾವಿರಕ್ಕೂ ಹೆಚ್ಚು ಕಿ.ಮೀ.ನಷ್ಟು ದೂರವನ್ನು ಗುಡ್ಡಗಾಡು ಪ್ರದೇಶದಲ್ಲೇ ಓಡಾಟ ನಡೆಸಲಾಗಿದ್ದು, ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next