ಒಂದು ತುಸು ಲಕ್ಷುರಿ, ಮತ್ತೂಂದು ಮಧ್ಯಮ ವರ್ಗ ಸ್ನೇಹಿ… ಇವೆರಡು ಬೆಲೆಯಲ್ಲಿ ಮಾರುಕಟ್ಟೆಗೆ ಇಳಿದಿರುವ ಎರಡು ಹೊಸ ಕಾರುಗಳ ಪರಿಚಯ ಈ ಬಾರಿ…
ಮಹೀಂದ್ರಾ ಮರಾರೆ ಎಂಪಿವಿ ಲಾಂಚ್ : ಕಾರುಗಳಾಯ್ತು, ಈಗ ಎಂಪಿವಿಗಳ ಕಾಲ. ಹಣವಿರುವಾಗ ಸಣ್ಣ ಕಾರುಗಳೇಕೆ ಎಂಬ, ತೀರಾ ಕಂಜೆಸ್ಟ್ ಆಗಿ ಪ್ರಯಾಣಿಸುವುದೇಕೆ ಎನ್ನುವವರು ಎಂಪಿವಿಗಳತ್ತ ಕಣ್ಣು ಹಾಯಿಸುತ್ತಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಿಯಾ ಕಾರ್ನೆವಲ್ ಎಂಬ ಎಂಪಿವಿ ಧೂಳೆಬ್ಬಿಸುತ್ತಿದೆ. ಇದರ ಜತೆಗೆ ಮಹೀಂದ್ರಾ ಅವರ ಮರಾರೆ ಎಂಪಿವಿ ಕೂಡ ಇದೆ. ಇದರ ಅಪ್‌ಡೇಟೆಡ್ ವರ್ಷನ್ ಆಗಿ ಬಿಎಸ್ 6 ಎಂಜಿನ್ ಅಳವಡಿಸಿಕೊಂಡು ಇದೇ ಕಾರು ಮತ್ತೆ ಲಾಂಚ್ ಆಗಿದೆ.
ಬೇರೆ ಎಂಪಿವಿಗಳ ರೀತಿ ಈ ಕಾರು ದುಬಾರಿಯೇನಲ್ಲ. ಅಂದರೆ, ಇದರ ಬೆಲೆ ಆರಂಭವಾಗುವುದೇ 11.25 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ. ದೆಹಲಿ). ಆದರೆ, ಎಂ2, ಎಂ4 ಪ್ಲಸ್ ಮತ್ತು ಎಂ6 ಪ್ಲಸ್ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಟಾಪ್ ವೇರಿಯಂಟ್ ಆಗಿರುವ ಎಂ6 ಪ್ಲಸ್‌ನಲ್ಲಿ 17 ಇಂಚಿನ ಡೈಮಂಡ್ ಕಟ್ ಅಲೇ ವೀಲ್‌ಗಳನ್ನು ಅಳವಡಿಸಲಾಗಿದೆ. ರಿಯರ್ ಪಾರ್ಕಿಂಗ್ ಕ್ಯಾಮೆರಾ, ಸ್ಟೀರಿಂಗ್ ಅಡಾಪ್ಟೀವ್ ಗೈಡ್‌ಲೈನ್ಸ್, ಆಟೋಮ್ಯಾಟಿಕ್ ಟೆಂಪರೇಚರ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಡ್ರೈವರ್ ಸೈಡ್ ವಿಂಡೋಸ್‌ಗಳ ಸೌಲಭ್ಯವೂ ಇದೆ. ಜತೆಗೆ ಇದು 7 ಇಂಚಿನ ಇನ್ಫೋಟೈನ್‌ಮೆಂಟ್ ಹೊಂದಿದ್ದು, ಇದೇ ಮೊದಲ ಬಾರಿಗೆ ಸರೌಂಡ್ ಕೂಲ್ ಟೆಕ್ನಾಲಜಿಯನ್ನೂ ಅಳವಡಿಸ ಲಾಗಿದೆ. ಇಂಡಸ್ಟ್ರಿಯಲ್ಲೇ ಈ ವ್ಯವಸ್ಥೆಯುಳ್ಳ ಮೊದಲ ಕಾರಿದು. ಇದರ ಬೆಲೆ 13.51 ಲಕ್ಷ ರೂ. (ಎಕ್ಸ್‌ಶೋರೂಂ ದರ, ದೆಹಲಿ).
ಹೊಸ ಲುಕ್‌ನೊಂದಿಗೆ ಹೋಂಡಾ ಜಾಝ್ ರಿಲೀಸ್ : ಭಾರತದ ಪ್ರೀಮಿಯಂ ಕಾರುಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್, ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ನ್ಯೂ ಹೋಂಡಾ ಜಾಝ್ ಅನ್ನು ಬಿಡುಗಡೆ ಮಾಡಿದೆ. ಹೊಸ ರೀತಿಯ ಲುಕ್, ಪ್ರೀಮಿಯಂ ಸ್ಟೈಲಿಂಗ್ ಜತೆಗೆ ಇದು ಮಾರುಕಟ್ಟೆಗೆ ಬಂದಿದೆ. ವಿಶೇಷವೆಂದರೆ, ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಹೋಂಡಾ ಕಂಪನಿಯ ನಾಲ್ಕನೇ ಕಾರಿದು. ಇದು 1.2 ಲೀಟರ್ ಬಿಎಸ್ 6 ಎಂಜಿನ್‌ಗೆ ಅಪ್‌ಡೇಟ್ ಆಗಿದ್ದು, ಮೂರು ರೇಂಜ್‌ಗಳಲ್ಲಿ ಲಭ್ಯವಿರಲಿದೆ. ಅಂದರೆ, ವಿ, ವಿಎಕ್ಸ್ ಮತ್ತು ಝಡ್ ಎಕ್ಸ್ ಮಾದರಿಯಲ್ಲಿ ಸಿಗಲಿದೆ. 5 ಗೇರಿನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಕಾರು 16.6 ಕಿ.ಮೀ. ಮೈಲೇಜ್ ಕೊಟ್ಟರೆ, ಸಿವಿಟಿ 17.1 ಕಿ.ಮೀ. ಮೈಲೇಜ್ ಕೊಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರಿನ ವಿಶೇಷ ಎಲೆಕ್ಟ್ರಿಕ್ ಸನ್‌ರೂಫ್. ಇದರಲ್ಲಿ ಏಳು ಇಂಚಿನ ಡಿಜಿಪ್ಯಾಡ್ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಇದ್ದು, ಆ್ಯಪಲ್ ಕಾರ್‌ಪ್ಲೇ, ಆ್ಯಂಡ್ರಾಯ್ಡ್ ಆಟೋ ಮತ್ತು ವೆಬ್‌ಲಿಂಕ್‌ಗೆ ಹೊಂದಿಕೊಳ್ಳುವಂತಿದೆ. ಈ ಕಾರಿನ ಎಕ್ಸ್‌ಶೋರೂಂ ದರ ದೆಹಲಿ ಮಾರುಕಟ್ಟೆಗೆ ಅನ್ವಯವಾಗುವಂತೆ ಹೇಳುವುದಾದರೆ, 7.50 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.
– ಸೋಮಶೇಖರ ಸಿ.ಜೆ.