ಶ್ರೀನಗರ: ಜಮ್ಮುಕಾಶ್ಮೀರದ ಚೆನಾಬ್ ನದಿಯ ಮೇಲೆ ನಿರ್ಮಿಸಲಾಗಿರುವ, ವಿಶ್ವದಲ್ಲೇ ಅತಿ ಎತ್ತರದ ರೈಲ್ವೆ ಮೇಲ್ಸೇತುವೆಯ ಪರೀಕ್ಷೆಯನ್ನು ಕೇಂದ್ರ ರೈಲ್ವೆ ಸಚಿವಾಲಯ ಆರಂಭಿಸಿದೆ.
ಮಹೀಂದ್ರಾ ಕಂಪನಿಯ ಬೊಲೆರೊ ವಾಹನದಲ್ಲಿ ಕೆಲವೊಂದು ಮಾರ್ಪಾಡು ಮಾಡಿ, ಈ ರೈಲ್ವೆ ಹಳಿಗಳ ಮೇಲೆ ಸಂಚರಿಸುವಂತೆ ಮಾಡಿರುವುದು ಈ ಪರೀಕ್ಷೆಗಳಲ್ಲಿ ಅತ್ಯಂತ ವಿಶೇಷವೆನಿಸಿದೆ.
ಬೊಲೆರೊದ ನಾಲ್ಕೂ ಚಕ್ರಗಳ ಮಧ್ಯಭಾಗದಲ್ಲಿ ಟ್ರ್ಯಾಕ್ ಮೇಲೆ ಚಲಿಸುವಂತೆ ಮಾಡಲು ಅಂತರ ಬಿಡಲಾಗಿದೆ. ಬೊಲೆರೊ ಹಿಂಭಾಗ ಒಂದು ಟ್ರಾಲಿಯನ್ನೂ ಕಟ್ಟಲಾಗಿತ್ತು. ಮಹೀಂದ್ರ ಬೊಲೆರೊ ಇಂತಹ ಎತ್ತರದ ಸೇತುವೆ ಮೇಲೆ ಸಂಚರಿಸಿದ ಮೊದಲ ಎಸ್‌ಯುವಿ ಎನಿಸಿಕೊಂಡಿದೆ. ಈ ಪ್ರಯತ್ನ ಜನರನ್ನು ಅಚ್ಚರಿಗೊಳಪಡಿಸಿದೆ.
359 ಮೀಟರ್ ಎತ್ತರದಲ್ಲಿರುವ ಈ ರೈಲ್ವೆ ಸೇತುವೆ, ಕಾಶ್ಮೀರವನ್ನು ಭಾರತದ ಇತರೆ ಭಾಗದೊಂದಿಗೆ ಬೆಸೆಯಲು ನೆರವಾಗುತ್ತದೆ. ಈ ವರ್ಷಾಂತ್ಯದಲ್ಲಿ ಈ ಟ್ರ್ಯಾಕ್ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ. ಸೇತುವೆಯನ್ನು ಅತ್ಯಂತ ಪರಿಸರಸೂಕ್ಷ್ಮ ಪ್ರದೇಶದಲ್ಲಿ ನಿರ್ಮಿಸಲಾಗಿರುವುದರಿಂದ ವಿವಿಧ ರೀತಿಯ ಪರೀಕ್ಷೆಗಳು ಅನಿವಾರ್ಯವೂ ಆಗಿದೆ.