ಕೊಲೊಂಬೋ: ಸುಪ್ರೀಂಕೋರ್ಟ್ ಆದೇಶದಿಂದ ಕೊನೆಗೂ ಶ್ರೀಲಂಕಾದ ಪ್ರಧಾನಿ ಹುದ್ದೆಗೆ ಮಹೀಂದ್ರ ರಾಜಪಕ್ಸೆ ಶನಿವಾರ ರಾಜೀನಾಮೆ ನೀಡುವ ಮೂಲಕ ಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ವಿವಾದಿತ ನಿರ್ಧಾರದ ಜಟಾಪಟಿ ಅಂತ್ಯಗೊಂಡಂತಾಗಿದೆ.
ಈ ಹಿನ್ನೆಲೆಯಲ್ಲಿ ರನಿಲ್ ವಿಕ್ರಮಸಿಂಘೆ ಅವರ ಹಾದಿ ಸುಗಮವಾದಂತಾಗಿದ್ದು, ಭಾನುವಾರ ಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ಪ್ರಧಾನಿ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ, ಅಕ್ಟೋಬರ್ 26ರಂದು ರಾಜಪಕ್ಸೆಯನ್ನು ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ಇದು ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿತ್ತು.
ಈ ಪ್ರಕರಣ ಶ್ರೀಲಂಕಾ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸಾಂವಿಧಾನಿಕ ಬಿಕ್ಕಟ್ಟಿನ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಅಧ್ಯಕ್ಷ ಸಿರಿಸೇನಾ ಅವರ ಕ್ರಮ ಕಾನೂನು ಬಾಹಿರ ಎಂದು ಘೋಷಿಸುವ ಮೂಲಕ ವಿಕ್ರಮಸಿಂಘೆಯ ಆಯ್ಕೆಯನ್ನು ಎತ್ತಿಹಿಡಿದಿತ್ತು.
ಶುಕ್ರವಾರ ಮತ್ತೆ ಸುಪ್ರೀಂಕೋರ್ಟ್ ರಾಜಪಕ್ಸೆ ಕುರಿತಂತೆ ನೀಡಿರುವ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಇದರಿಂದ ಕಾನೂನು ಸಮರದಲ್ಲಿ ಸೋಲು ಕಂಡ ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.