Advertisement

ಬಿಜೆಪಿ ಸೇರಿದ  ಮಹೇಶ್‌ಗೆ ಮಂತ್ರಿ ಸ್ಥಾನ ?

10:48 PM Aug 05, 2021 | Team Udayavani |

ಬೆಂಗಳೂರು: ರಾಜ್ಯ ದಲ್ಲಿ ಬಿಎಸ್‌ಪಿಯ ಏಕೈಕ ಶಾಸಕ ರಾಗಿರುವ ಎನ್‌. ಮಹೇಶ್‌ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದು, ಅವರು ಶೀಘ್ರವೇ  ಬೊಮ್ಮಾಯಿ  ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

Advertisement

ಬಿಜೆಪಿಯಲ್ಲಿ ದಲಿತ ಬಲಗೈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ದೃಷ್ಟಿಯಿಂದ  ವರಿಷ್ಠರು ಹಾಗೂ ರಾಜ್ಯ ನಾಯಕರು ಮಹೇಶ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಅಲ್ಲದೆ ಚಾಮರಾಜನಗರ ಹಾಗೂ ಮೈಸೂರು ಭಾಗದಲ್ಲಿ  ಸಂಪುಟದಲ್ಲಿ ಯಾರಿಗೂ ಸ್ಥಾನ ನೀಡದೆ ಇರುವುದರಿಂದ ಮಹೇಶ್‌ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಪ್ರಾದೇಶಿಕವಾಗಿ ಹಾಗೂ  ಆ ಭಾಗದಲ್ಲಿ ಹೆಚ್ಚಾಗಿರುವ ದಲಿತ ಬಲಗೈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ವಿಷಯದಲ್ಲಿಯೂ ನ್ಯಾಯ

ಒದಗಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ನಾಯಕರಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅವರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳುವ ಭರವಸೆಯನ್ನು  ಯಡಿಯೂರಪ್ಪ ನೀಡಿದ್ದಾರೆ ಎನ್ನಲಾ ಗಿದ್ದು, ಆ ಭರವಸೆಯಿಂದಲೇ ಮಹೇಶ್‌ ಬಿಜೆಪಿ ಸೇರಿದ್ದಾರೆ ಎನ್ನಲಾಗುತ್ತಿದೆ.

ಬಲಗೈ ಸಮುದಾಯಕ್ಕೆ ಆದ್ಯತೆ :

ಬಿಜೆಪಿಯಲ್ಲಿ ಬಹುತೇಕ ಎಡಗೈ ಸಮುದಾಯದ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗಿರುವ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಆನೇಕಲ್‌ ನಾರಾಯಣ ಸ್ವಾಮಿ ಹಾಗೂ ಬೊಮ್ಮಾಯಿ ಸಂಪುಟದಲ್ಲಿ  ಗೋವಿಂದ ಕಾರಜೋಳ ಇಬ್ಬರೂ ಎಡಗೈ ಸಮುದಾಯಕ್ಕೆ ಸೇರಿದವ ರಾಗಿದ್ದಾರೆ. ಹೀಗಾಗಿ ಸಂಪುಟದಲ್ಲಿ ದಲಿತ ಬಲಗೈ ಸಮುದಾಯಕ್ಕೆ ಸೇರಿದವರಿಗೆ ಆದ್ಯತೆ ನೀಡಬೇಕೆಂಬ ಬೇಡಿಕೆ ಇದೆ.

Advertisement

ಬಿಜೆಪಿಯಲ್ಲಿ  ನೆಹರೂ ಓಲೇಕಾರ್‌, ಎಂ.ಪಿ. ಕುಮಾರ ಸ್ವಾಮಿ, ಹರ್ಷವರ್ಧನ ದಲಿತ ಬಲಗೈ ಸಮುದಾಯಕ್ಕೆ ಸೇರಿದವರು. ಮಹೇಶ್‌ ಸೇರ್ಪಡೆಗಾಗಿಯೇ ಅವರನ್ನು  ಸಂಪುಟದಿಂದ ದೂರ ಇರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಎಸ್‌ವೈ ಪರ ನಿಂತಿದ್ದರು:

ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಸರಕಾರದಲ್ಲಿ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಎನ್‌. ಮಹೇಶ್‌ ಅವರು ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವಿನ ಗೊಂದಲ ಹಾಗೂ ಬಿಎಸ್‌ಪಿ ವರಿಷ್ಠೆ ಮಾಯಾವತಿ ಸೂಚನೆ ಮೇರೆಗೆ ಸಂಪುಟದಿಂದ ಹೊರ ಬಂದು ಸರಕಾರದಿಂದ ಅಂತರ ಕಾಯ್ದುಕೊಂಡಿದ್ದರು. ಅಲ್ಲದೇ ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಗೈರು ಹಾಜರಾಗುವ ಮೂಲಕ ಮೈತ್ರಿ ಸರಕಾರದ ವಿರುದ್ಧದ  ನಿಲುವು ಪ್ರಕಟಿಸಿದ್ದರು.

ಬಳಿಕ ಸರಕಾರ ಪತನಗೊಂಡು  ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ  ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಅವರ ಪರ ನಿಂತಿದ್ದರು. ಅದೇ ಕಾರಣಕ್ಕೆ ಬಿಎಸ್‌ಪಿಯಿಂದ ಅಮಾನತಾಗಿದ್ದರು.

ಮೂಲ ಕಾರ್ಯಕರ್ತರ ಅಸಮಾಧಾನ  :

ಪ್ರಭಾವ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಹೊರಗಡೆಯಿಂದ ಕರೆದುಕೊಂಡು ಬಂದು ಸಂಪುಟದಲ್ಲಿ ಅವಕಾಶ ನೀಡುತ್ತಿರುವ ಬಗ್ಗೆ ಮೂಲ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಎನ್‌.ಮಹೇಶ್‌ ಸೇರ್ಪಡೆಗೆ ಚಾಮರಾಜನಗರ ಹಾಗೂ ಮೈಸೂರು ಭಾಗದ ಸ್ಥಳೀಯ ದಲಿತ ನಾಯಕರು ಹಾಗೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next