ಮುಂಬಯಿ : ಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಗೆ ಒತ್ತೆ ಹಣಕ್ಕಾಗಿ ಜೀವ ಬೆದರಿಕೆ ಒಡ್ಡಲಾಗಿರುವುದು ವರದಿಯಾಗಿದೆ.
50 ಲಕ್ಷ ರೂ. ಕೊಡಬೇಕು; ಇಲ್ಲದಿದ್ದರೆ ಕೊಂದು ಹಾಕುವೆ ಎಂದು ಗ್ಯಾಂಗ್ ಲೀಡರ್ ಎಂದು ಹೇಳಿಕೊಂಡಿರುವ ಆಗಂತುಕನೋರ್ವ ಮಹೇಶ್ ಭಟ್‌ಗೆ ಫೋನ್ ಮೂಲಕ ಜೀವ ಬೆದರಿಕೆ ಒಡ್ಡಿದ್ದಾನೆ.
50 ಲಕ್ಷ ರೂ. ಕೊಡದೆ ಹೊದರೆ ನಿಮ್ಮ ಪುತ್ರಿ, ಖ್ಯಾತ ಬಾಲಿವುಡ್‌ನಟಿ ಅಲಿಯಾ ಭಟ್ ಮತ್ತು ನಿಮ್ಮ ಪತ್ನಿ ಸೋನಿ ರಜ್‌ದಾನ್ ಅವರನ್ನು ಕೊಲ್ಲುವುದಾಗಿ ಆಗಂತುಕನು ಮಹೇಶ್ ಭಟ್‌ಗೆ ಬೆದರಿಕೆ ಒಡ್ಡಿರುವುದಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.
ಮಹೇಶ್ ಭಟ್‌ಗೆ ಕಳೆದ ಫೆ.26ರಂದೇ ಫೋನ್ ಮೂಲಕ ಈ ಬೆದರಿಕೆ ಬಂದಿತ್ತು. ಇದ್ಯಾರೋ ತಮಾಷೆಗೆ ಮಾಡಿರುವ ಕರೆ ಎಂದು ಮಹೇಶ್ ಭಾವಿಸಿ ಸುಮ್ಮನಿದ್ದರು. ಆದರೆ ಕೆಲವು ದಿನಗಳ ಬಳಿಕ ಅವರಿಗೆ ಮತ್ತೆ ಅದೇ ಬೆದರಿಕೆಯು ವಾಟ್ಸಾಪ್‌ನಲ್ಲಿ ಬಂದಿತ್ತು. ತನ್ನ ಕರೆಯನ್ನು ನಿರ್ಲಕ್ಷಿಸಿದರೆ ಪರಿಣಾಮ ತುಂಬಾ ಕೆಟ್ಟದಾದೀತು ಎಂದು ಆಗಂತುಕನ ವಾಟ್ಸಾಪ್ ಸಂದೇಶದಲ್ಲಿ ಎಚ್ಚರಿಸಿದ್ದ.
ಮಹೇಶ್ ಭಟ್ ಈ ಕುರಿತು ನೀಡಿರುವ ದೂರಿನ ಪ್ರಕಾರ ಪೊಲೀಸರು ಆಗಂತುಕನ ಜಾಡು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.