ರಾಂಚಿ : ವಿಶ್ವ ಪ್ರಸಿದ್ಧಿಯ ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಅವರಿಗೆ ಜೀವ ಬೆದರಿಕೆ ಇದೆಯೇ ?
ತನಗೆ ಜೀವ ಬೆದರಿಕೆ ಇದೆ ಎಂಬ ಕಾರಣಕ್ಕೆ ಧೋನಿ ಪತ್ನಿ ಸಾಕ್ಷಿ, ಪಿಸ್ತೂಲು ಲೈಸನ್ಸ್ ಗೆ ಅರ್ಜಿ ಹಾಕಿದ್ದಾರೆ.
ಜಾರ್ಖಂಡ್‌ನ ರಾಜಧಾನಿಯಾಗಿರುವ ರಾಂಚಿಯಲ್ಲಿನ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿರುವ ಸಾಕ್ಷಿ, ತನಗೆ ಪಿಸ್ತೂಲು ಅಥವಾ 0.32 ಬೋರ್ ರಿವಾಲ್ವರ್ ಹೊಂದಲು ಪರವಾನಿಗೆ ಕೊಡಬೇಕು ಎಂದು ಕೋರಿದ್ದಾರೆ. ದಿನದ ಹೆಚ್ಚಿನ ಹೊತ್ತು ತಾನು ತನ್ನ ಮನೆಯಲ್ಲಿ ಒಂಟಿಯಾಗಿರುವುದರಿಂದ ತನಗೆ ಪಿಸ್ತೂಲು ಅಥವಾ ರಿವಾಲ್ವರ್‌ನ ಅಗತ್ಯವಿದೆ ಎಂದು ಸಾಕ್ಷಿ ಹೇಳಿದ್ದಾರೆ.
ರಾಜಧಾನಿ ರಾಂಚಿಯಲ್ಲಿ ನಾನು ಖಾಸಗಿ ಕೆಲಸದ ಮೇಲೆ ಒಂಟಿಯಾಗಿ ಹೋಗುವುದರಿಂದ ನನಗೆ ಜೀವ ಭಯ ಇದೆ. ಆದುದರಿಂದ ತತ್‌ಕ್ಷಣವೇ ನನಗೆ ಪಿಸ್ತೂಲು ಪರವಾನಿಗೆಯನ್ನು ಮಂಜೂರು ಮಾಡಬೇಕು. ಅದರ ಆಧಾರದಲ್ಲಿ ನಾನು ಪಿಸ್ತೂಲು ಖರೀದಿಸಿಕೊಂಡು ನನ್ನ ಭದ್ರತೆಯನ್ನು ನಾನು ಖಾತರಿಪಡಿಸಿಕೊಳ್ಳುವೆ ಎಂದು ಸಾಕ್ಷಿ ಹೇಳಿದ್ದಾರೆ.
ಧೋನಿ ಪತ್ನಿ ಸಾಕ್ಷಿ ಅವರು ತಮ್ಮ ಅರ್ಜಿಯನ್ನು ರಾಂಚಿ ಜಿಲ್ಲಾ ಮ್ಯಾಜಿಸ್ಟ್ರೇಟರ ಕಚೇರಿಯಲ್ಲಿ ಸಲ್ಲಿಸಿದ್ದಾರೆ ಅಲ್ಲಿಂದ ಅದು ಅರಗೋರ ಪೊಲೀಸ್ ಠಾಣೆಗೆ ಬಂದಿದೆ.
ಸಾಕ್ಷಿ ವಿರುದ್ಧ ಯಾವುದೇ ದೂರಾಗಲೀ ಕೇಸಾಗಲೀ ಇಲ್ಲ ಎಂದು ಅರಗೋರಾ ಪೊಲೀಸ್ ಠಾಣಾಧಿಕಾರಿ ತಮ್ಮ ವರದಿಯಲ್ಲಿ ಹೇಳಿದ್ದಾರೆ. ಅಂತೆಯೇ ಆಕೆಯ ಅರ್ಜಿಯನ್ನು ಹತಿಯಾ ಪೊಲೀಸ್ ಉಪಾಯುಕ್ತ ವಿಕಾಸ್ ಪಾಂಡೆ ಅವರಿಗೆ ಕಳುಹಿಸಲಾಗಿದೆ. ಅವರು ಅದನ್ನು ನಗರ ಪೊಲೀಸ್ ಸುಪರಿಂಟೆಂಡೆಂಟರಿಗೆ ಮತ್ತು ಅವರು ಹಿರಿಯ ಪೊಲೀಸ್ ಸುಪರಿಂಟೆಂಡೆಂಟರಿಗೆ ಕಳುಹಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅವರಿಗೆ 2010ರಲ್ಲೇ ರಾಂಚಿ ಜಿಲ್ಲಾ ಆಡಳಿತ ಶಸ್ತ್ರಾಸ್ತ್ರ ಲೈಸನ್ಸ್ ನೀಡಿದೆ.