ಚೆನ್ನೈ: ಧೋನಿ ಅಭಿಮಾನಿಗಳ ಪಾಲಿನ ಸಮಾಧಾನಕರ ಸಂಗತಿಯೆಂದರೆ ಅವರು ಐಪಿಎಲ್‌ನಾಲ್ಲದರೂ ಆಡುತ್ತಾರಲ್ಲ ಎಂಬುದು.
ಆದರೆ ಈ ವರ್ಷದ ಐಪಿಎಲ್‌ನಲ್ಲಿ ಚೆನ್ನೈ ಚಾಂಪಿಯನ್ ಆದರೆ ಈ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ಧೋನಿ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರಾಗಲಿದ್ದಾರೆ ಎಂದು ಚೆನ್ನೈ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಧೋನಿ ಅವರ ಗುರಿ ಟಿ20 ವಿಶ್ವಕಪ್ ಆಡುವುದಾಗಿತ್ತು. ಬಳಿಕ ಕ್ರಿಕೆಟ್ ವಿದಾಯ ಘೋಷಿಸುವ ಯೋಜನೆಯಲ್ಲಿದ್ದರು. ಆದರೆ ಕೋವಿಡ್ 19 ಕಾರಣದಿಂದ ಇದು ಮುಂದೂಡಲ್ಪಟ್ಟಿದ್ದರಿಂದ ಇನ್ನೂ ಒಂದು ವರ್ಷ ಕಾಯುವ ಸ್ಥಿತಿಯಲ್ಲಿ ಅವರಿರಲಿಲ್ಲ.
ಹೀಗಾಗಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಲು ಮುಂದಾದರು. ಅವರ ಮುಂದಿನ ಗುರಿ ಒಂದೇ, ಅದು ಐಪಿಎಲ್. ಈ ವರ್ಷ ಚೆನ್ನೈ ಚಾಂಪಿಯನ್ ಆಗಿ ಮೂಡಿಬಂದರೆ ಈ ಟ್ರೋಫಿಯನ್ನು ಎತ್ತಿಹಿಡಿದು ಐಪಿಎಲ್‌ನಿಂದಲೂ ಅವರು ದೂರ ಸರಿಯಲಿದ್ದಾರೆ’ ಎಂದು ಆ ಅಧಿಕಾರಿ ಹೇಳಿದರು.
ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಖಾಯಂ ನಾಯಕರಾಗಿದ್ದರು ಎಂಬುದನ್ನು ಮರೆಯುವಂತಿಲ್ಲ.
ತಂಡವನ್ನು ಮೂರು ಸಲ ಚಾಂಪಿಯನ್ ಪಟ್ಟಕ್ಕೇರಿಸಿದ ಹೆಗ್ಗಳಿಕೆ ಅವರದು. ಚೆನ್ನೈಗೆ ನಿಷೇಧ ವಿಧಿಸಿದಾಗ ಧೋನಿ ಪುಣೆ ತಂಡವನ್ನು ಪ್ರತಿನಿಧಿಸಿದ್ದರು.