ಬೆಂಗಳೂರು: “ನಮ್ಮ ಮೆಟ್ರೋ’ ಯೋಜನೆಗೆ ಈಗ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ನೂತನ ಸಾರಥಿ.
ಪ್ರದೀಪ್‌ಸಿಂಗ್ ಖರೋಲ ಅವರಿಂದ ತೆರವಾದ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಪ್ರಭಾರಿಯಾಗಿ ಸರ್ಕಾರವು ಮಹೇಂದ್ರ ಜೈನ್ ಅವರನ್ನು ನೇಮಕ ಮಾಡಿದೆ. ರಜೆ ದಿನ ಭಾನುವಾರವೇ ಮಹೇಂದ್ರ ಜೈನ್ ಅವರು ಅಧಿಕಾರ ವಹಿಸಿಕೊಂಡರು.
ಬಿಎಂಆರ್‌ಸಿ ಕಚೇರಿಯಲ್ಲಿ ಮಹೇಂದ್ರ ಜೈನ್ ಅವರಿಗೆ ಪುಷ್ಪಗುತ್ಛ ನೀಡಿ, ನೂತನ ವ್ಯವಸ್ಥಾಪಕ ನಿರ್ದೇಶಕರನ್ನು ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಮಹೇಂದ್ರ ಜೈನ್ ಅಪರ ಮುಖ್ಯ ಕಾರ್ಯದರ್ಶಿ ಜತೆಗೆ ಹೆಚ್ಚುವರಿಯಾಗಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ನಿರ್ವಹಿಸಲಿದ್ದಾರೆ.
ಪ್ರದೀಪ್‌ಸಿಂಗ್ ಖರೋಲ ಅವರು ಏರ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಈಚೆಗೆ ವರ್ಗಾವಣೆ ಆಗಿದ್ದರು. ಆದರೆ, ಅವರಿಂದ ತೆರವಾದ ಸ್ಥಾನಕ್ಕೆ ರಾಜ್ಯ ಸರ್ಕಾರ ಇನ್ನೊಬ್ಬರನ್ನು ನೇಮಿಸಿರಲಿಲ್ಲ. ಹಾಗಾಗಿ, ತಾತ್ಕಾಲಿಕವಾಗಿ ಮುಂದುವರಿದಿದ್ದರು. ಭಾನುವಾರ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿತು.
ಈ ಮಧ್ಯೆ ಸರ್ಕಾರ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಶೀಘ್ರದಲ್ಲೇ ಶಾಶ್ವತವಾಗಿ ಒಬ್ಬ ಅಧಿಕಾರಿಯನ್ನು ನೇಮಿಸಲಿದೆ. ಇದಕ್ಕಾಗಿ ಮೂರ್‍ನಾಲ್ಕು ಐಎಎಸ್ ಅಧಿಕಾರಿಗಳ ಹೆಸರು ಕೇಳಿಬರುತ್ತಿದೆ. ಈಚೆಗೆ ಐಟಿ-ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಬಿಎಂಆರ್‌ಸಿ ಕಚೇರಿಗೆ ಭೇಟಿ ನೀಡಿ,
ಪ್ರದೀಪ್‌ಸಿಂಗ್ ಖರೋಲ ಅವರೊಂದಿಗೆ ಒಂದು ತಾಸಿಗೂ ಹೆಚ್ಚು ಹೊತ್ತು ಸಮಾಲೋಚನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಮತ್ತೂಂದೆಡೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರ ಹೆಸರು ಕೂಡ ಕೇಳಿಬರುತ್ತಿದೆ.