ಮಣಿಪಾಲ: ಮಾಹೆ ವಿ.ವಿ. ಮತ್ತು ಬಾಸ್ಕೆಟ್‌ಬಾಲ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್ಐ) ಜತೆಯಾಗಿ ಆ್ಯತ್ಲೆಟಿಕ್ ಪ್ರತಿಭೆಯನ್ನು ಪೋಷಿಸುವ ಮತ್ತು ಭಾರತೀಯ ಬಾಸ್ಕೆಟ್‌ಬಾಲ್‌ನಲ್ಲಿ ಶ್ರೇಷ್ಠತೆಯ ಸಂಸ್ಕೃತಿ ಬೆಳೆಸುವ ಗುರಿಯೊಂದಿಗೆ ಮಾಹೆ ಕೇಂದ್ರ ಕಚೇರಿಯಲ್ಲಿ ಮಹತ್ವದ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಿವೆ.
ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಭಾರತದ ಬಾಸ್ಕೆಟ್‌ಬಾಲ್ ಫೆಡರೇಶನ್‌ನೊಂದಿಗೆ ಮಾಹೆ ಪಾಲುದಾರಿಕೆ ರೂಪಿಸುವುದು ಮಾತ್ರವಲ್ಲದೆ ಅದರಲ್ಲಿ ಶ್ರೇಷ್ಠತೆ, ಆ್ಯತ್ಲೆಟಿಸಂ ಬೆಳೆಸಲು ಸಹಕರಿಸಲಿದ್ದೇವೆ. ಈ ಮೂಲಕ ಆ್ಯತ್ಲೆಟಿಕ್ ಪ್ರತಿಭೆಗಳನ್ನು ಬೆಳೆಸುವ ಜತೆಗೆ ಭವಿಷ್ಯದ ಚಾಂಪಿಯನ್‌ಗಳಿಗೆ ಪ್ರೇರೇಪಣೆ ನೀಡುವ ಕಾರ್ಯ ಆಗಲಿದೆ ಎಂದರು.
ಸಹ ಕುಲಪತಿ ಡಾ| ಶರತ್ ಕೆ. ರಾವ್ ಮಾತನಾಡಿ, ಈ ಒಡಂಬಡಿಕೆ ಯೊಂದಿಗೆ ಭಾರತದಲ್ಲಿ ಬಾಸ್ಕೆಟ್‌ಬಾಲ್ ಕ್ರೀಡೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಬಿಎಫ್ಐ ಅಧ್ಯಕ್ಷ ಆಧವ್ ಅರ್ಜುನ ಮಾತನಾಡಿ, “ಮಾಹೆಯೊಂದಿಗಿನ ಒಡಂಬಡಿಕೆಯಿಂದ ಕ್ರೀಡಾಪಟುಗಳಿಗೆ ಉನ್ನತ ದರ್ಜೆಯ ಸೌಲಭ್ಯ, ಜ್ಞಾನದ ತರಬೇತಿ ಮತ್ತು ಶೈಕ್ಷಣಿಕ ಬೆಂಬಲ ಸಿಗಲಿದೆ. ವಿಶ್ವವೇದಿಕೆಯಲ್ಲಿ ಭಾರತೀಯ ಬಾಸ್ಕೆಟ್‌ಬಾಲ್ ಆಟಗಾ ರರು ಮಿಂಚುವಂತಾಗಲಿ’ ಎಂದರು.
ಮುಖ್ಯ ಹಣಕಾಸು ಅಧಿಕಾರಿ ಶ್ಯಾಮ್ ಆದಿತ್ಯ, ಮಾಹೆ ಕುಲಸಚಿವ ಡಾ| ಗಿರಿಧರ್ ಕಿಣಿ, ಕ್ರೀಡಾ ಕೌನ್ಸಿಲ್ ಕಾರ್ಯದರ್ಶಿ ಡಾ| ವಿನೋದ್ ನಾಯಕ್, ಎಂಸಿಎಚ್‌ಪಿ ಡೀನ್ ಡಾ| ಅರುಣ್ ಮಯ್ಯ, ಕಾರ್ಪೂರೇಟ್ ರಿಲೇಶನ್ ನಿರ್ದೇಶಕ ಹರೀಶ್ ಎಸ್. ಕುಮಾರ್, ಎಚ್‌ಒಡಿ ಡಾ| ಸಂದೀಪ್ ಎಸ್. ಶೆಣೈ, ಜುಗನ್ ಸುಕನೇಶ್ವರ್, ರೇನ್ ತ್ರೇವೊರ್ ಡಯಾಸ್ ಉಪಸ್ಥಿತರಿದ್ದರು.