ಮಣಿಪಾಲ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಮೌಲ್ಯಯುತ ಕಾರ್ಯಗಳಿಗೆ ಮಾಹೆ ವಿಶ್ವವಿದ್ಯಾನಿಲಯ ನಿರಂತರ ಬೆಂಬಲ ನೀಡುತ್ತದೆ ಎಂದು ವಿ.ವಿ.ಯ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಮಣಿಪಾಲದ ಶಾಂತನು ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಹಾಗೂ ಮಾಹೆ ವಿ.ವಿ.ಯ ಜಂಟಿ ಆಶ್ರಯದಲ್ಲಿ ರವಿವಾರ ಪರೀಕ ಶ್ರೀ ಶ್ರೀನಿವಾಸ ಪ್ರಸನ್ನ, ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಜರಗಿದ ಆತ್ರಾಡಿ-ಪರೀಕ ಗ್ರಾಮಸ್ಥರಿಗೆ “ಶಾಂತನು ಶೆಟ್ಟಿ ಆರೋಗ್ಯ ಕಾರ್ಡ್’ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಮೌಲ್ಯ, ಅಶಕ್ತರಿಗೆ ನೆರವು, ಆರೋಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಸಹಕಾರ ಮನೋಭಾವ ಆಶಯವನ್ನಿಟ್ಟು ರೂಪುಗೊಂಡ ಶಾಂತನು ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಕಾರ್ಯ ಮಾದರಿಯಾಗಿದೆ. ಟ್ರಸ್ಟ್ ಮೂಲಕ ತಮ್ಮ ಊರಿನ ಜನರಿಗೆ ಆರೋಗ್ಯದ ನೆರವು ನೀಡುವ ಮೂಲಕ ಸೋಮನಾಥ್ ಶೆಟ್ಟಿ, ನಟರಾಜ್ ಹೆಗ್ಡೆ ನೇತೃತ್ವದ ಈ ಟ್ರಸ್ಟ್ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಇಲ್ಲಿನ ರೋಗಿಗಳಿಗೆ ಟ್ರಸ್ಟ್ ಮತ್ತು ಮಾಹೆ ಮ್ಯಾಚಿಂಗ್ ಗ್ರ್ಯಾಂಟ್ ಮೂಲಕ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರೆಯಲಿದೆ ಎಂದರು.
ಶಾಂತನು ಶೆಟ್ಟಿ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಸೋಮನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್, ಸಹ ಕುಲಪತಿ ಡಾ| ಶರತ್ ಕುಮಾರ್ ರಾವ್, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ, ಚೀಫ್ ಆಪರೇಟಿಂಗ್ ಆಫಿಸರ್ ಡಾ| ಆನಂದ್ ವೇಣುಗೋಪಾಲ್, ಕೆಎಂಸಿ ಡೀನ್ ಡಾ| ಪದ್ಮರಾಜ ಹೆಗ್ಡೆ, ಉಡುಪಿ ಟಿಎಂಎ ಪೈ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ್ ಉಮಾಕಾಂತ್, ಪರೀಕ ಸೌಖ್ಯವನದ ವ್ಯವಸ್ಥಾಪಕ ಸೀತಾರಾಮ ತೋಳ್ಪಡಿತ್ತಾಯ, ಟ್ರಸ್ಟಿಗಳಾದ ಚಿತ್ರಾ ಸೋಮನಾಥ್ ಶೆಟ್ಟಿ, ಗೋಪಿನಾಥ್ ಶೆಟ್ಟಿ, ಅಶ್ವಿನ್ ಶೆಟ್ಟಿ, ರಾಜಾರಾಮ್ ಹೆಗ್ಡೆ ಉಪಸ್ಥಿತರಿದ್ದರು. ಜಿತೇಂದ್ರ ಹೆಗ್ಡೆ ವಂದಿಸಿ, ಶಿವಪ್ರಸಾದ್ ಶೆಟ್ಟಿ ನಿರೂಪಿಸಿದರು.
610 ಕುಟುಂಬಗಳಿಗೆ ನೆರವು
ಟ್ರಸ್ಟ್‌ನ ಕಾರ್ಯದರ್ಶಿ ನಟರಾಜ್ ಹೆಗ್ಡೆ ಪ್ರಸ್ತಾವನೆಗೈದು, ಆತ್ರಾಡಿ-ಪರೀಕ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ 610 ಕುಟುಂಬಗಳಿಗೆ “ಶಾಂತನು ಶೆಟ್ಟಿ ಆರೋಗ್ಯ ಕಾರ್ಡ್’ ನೀಡಲಾಗುತ್ತಿದೆ. ಟ್ರಸ್ಟ್ ವತಿಯಿಂದ 1 ಕೋ. ರೂ. ನೀಡಲಾಗಿದ್ದು, ಮಾಹೆ 1 ಕೋ.ರೂ. ಮ್ಯಾಚಿಂಗ್ ಗ್ರ್ಯಾಂಟ್ ಕಲ್ಪಿಸಿದೆ. ಈ 2 ಕೋ.ರೂ. ಮೊತ್ತದಿಂದ ಬರುವ ಬಡ್ಡಿಯನ್ನು ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರಿಗೆ ರಿಯಾಯಿತಿಯಲ್ಲಿ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಮುಂದಿನ ಹಂತದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಸಲಾಗುವುದು ಎಂದರು.