Advertisement

ಮಹಾರಾಷ್ಟ್ರದಲ್ಲಿ ಗೆದ್ದ ಮಹಾಯುತಿ

09:55 AM Oct 26, 2019 | Team Udayavani |

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ದೇವೇಂದ್ರ ಫ‌ಡ್ನವೀಸ್‌ ನೇತೃತ್ವದ ಬಿಜೆಪಿ-ಶಿವಸೇನೆ ಮೈತ್ರಿಕೂಟ ಗೆದ್ದು ಅಧಿಕಾರ ಉಳಿಸಿಕೊಂಡಿದೆ. ಕಳೆದ ಬಾರಿ ಬಿಜೆಪಿ, ಶಿವಸೇನೆ ಮೈತ್ರಿಗೆ 185 ಸ್ಥಾನ ಬಂದಿದ್ದವು. ಈ ಬಾರಿ 161 ಸ್ಥಾನ ಲಭಿಸಿದೆ. ಇನ್ನು ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಗೆ 98 ಸ್ಥಾನ ಬಂದಿದ್ದು, ಕಳೆದ ಬಾರಿ 43 ಸ್ಥಾನ ಸಿಕ್ಕಿತ್ತು. 2014ನೇ ಸಾಲಿನ ವಿಧಾನಸಭೆ ಚುನಾವಣೆ ಫ‌ಲಿತಾಂಶಕ್ಕೆ ಹೋಲಿಕೆ ಮಾಡಿದರೆ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದಿರುವುದು ಗಮ ನಾರ್ಹ. ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟದಲ್ಲಿ 2014ಕ್ಕೆ ಹೋಲಿಕೆ ಮಾಡಿದರೆ ಎನ್‌ಸಿಪಿಗೆ ಹೆಚ್ಚಿನ ಸ್ಥಾನಗಳು ಸಿಕ್ಕಿವೆ.

Advertisement

ಎನ್‌ಸಿಪಿ 54, ಕಾಂಗ್ರೆಸ್‌ 44 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಅಂದರೆ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ಗಿಂತ ಎನ್‌ಸಿಪಿ ಏಳು ಕ್ಷೇತ್ರಗಳಲ್ಲಿ ಮುಂದಿದೆ.
ಗೆದ್ದ ಪ್ರಮುಖರಲ್ಲಿ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌, ಶಿವಸೇನೆ ನಾಯಕ ಆದಿತ್ಯ ಠಾಕ್ರೆ, ಮಹಾರಾಷ್ಟ್ರ ವಿಧಾನ ಪರಿ ಷತ್‌ನಲ್ಲಿ ಸದ್ಯ ಪ್ರತಿಪಕ್ಷ ನಾಯಕರಾಗಿರುವ ಧನಂಜಯ ಮುಂಡೆ, ಬಾರಾಮತಿ ಕ್ಷೇತ್ರದಿಂದ ಎನ್‌ಸಿಪಿಯ ಅಜಿತ್‌ ಪವಾರ್‌, ಕೊತ್ರುಡ್‌ ಕ್ಷೇತ್ರದಿಂದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌, ಭೋಕಾರ್‌ ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕ ಅಶೋಕ್‌ ಚವಾಣ್‌ ಸೇರಿದ್ದಾರೆ.

ಸ್ಟ್ರೈಕ್‌ ರೇಟ್‌ ಹೆಚ್ಚಾಗಿದೆ: ಫ‌ಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಫ‌ಡ್ನವೀಸ್‌, ಹಿಂದಿನ ಚುನಾವಣೆಗೆ ಹೋಲಿಕೆ ಮಾಡಿದರೆ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದಿರಬ ಹುದು. ಆದರೆ ಚುನಾವಣೆಯಲ್ಲಿನ ಸ್ಟ್ರೈಕ್‌ ರೇಟ್‌ ಈ ಬಾರಿ ಹೆಚ್ಚಾಗಿದೆ ಎಂದಿದ್ದಾರೆ. ಈ ಹಿಂದೆಯೇ ನಿಗದಿಯಾದಂತೆ ಬಿಜೆಪಿ ಮತ್ತು ಶಿವಸೇನೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ರಾಜ್ಯದ ಜನರು ವಿಶ್ವಾಸವಿತ್ತು ಚುನಾಯಿಸಿದ್ದಕ್ಕೆ ಸಿಎಂ ಧನ್ಯವಾದ ಸಮರ್ಪಿ ಸಿದ್ದಾರೆ. 200ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಬೇಕು ಎಂದು ಗುರಿ ಹಾಕಿಕೊಂಡಿದ್ದರೂ, ಅದನ್ನು ತಲುಪುವಲ್ಲಿ ಬಿಜೆಪಿ ಎಡವಿದೆ ಎಂದಿದ್ದಾರೆ. ಪಕ್ಷದ ಕೆಲವು ನಾಯಕರು ಬಂಡಾಯ ಎದ್ದಿದ್ದರಿಂದ ಕೊಂಚ ಹಿನ್ನಡೆ ಉಂಟಾಗಿದೆ. ಆದರೆ ಆ ದಾರಿ ಹಿಡಿದ 15 ಮಂದಿ ನಾಯಕರು ತಮ್ಮ ಜತೆಗೆ ಸಂಪರ್ಕ ದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ 50:50ರ ಅನುಪಾತದಲ್ಲಿ ಅಧಿ ಕಾರ ಹಂಚಿಕೆ ನಡೆಯಬೇಕು ಎಂಬ ಶಿವಸೇನೆ ಕಾರ್ಯಾಧ್ಯಕ್ಷ ಉದ್ಧವ್‌ ಠಾಕ್ರೆ ಹೇಳಿಕೆಯ ತೀವ್ರತೆ ತಗ್ಗಿಸಲು ಯತ್ನಿಸಿದ್ದಾರೆ.

ಪಂಕಜಾ ಮುಂಡೆ ಸೋಲು
ಪಾರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವೆ ಪಂಕಜಾ ಮುಂಡೆ ಸೋಲು ಅನುಭವಿಸಿದ್ದಕ್ಕೆ ಮುಖ್ಯಮಂತ್ರಿ ಆಘಾತ ವ್ಯಕ್ತಪಡಿಸಿದ್ದಾರೆ. ಜತೆಗೆ ಸತಾರಾ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಉದಯನ್‌ ರಾಜೆ ಭೋಸಲೆ ಸೋತಿರುವುದು ನೋವು ತಂದಿದೆ ಎಂದು ಹೇಳಿದ್ದಾರೆ. 2014ರ ಚುನಾವಣೆಯಲ್ಲಿ 260 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 122 ಕ್ಷೇತ್ರಗಳಲ್ಲಿ ಗೆದ್ದಿದ್ದೆವು. ಈ ಬಾರಿ 164 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೇವೆ. ಒಟ್ಟಾರೆ ಫ‌ಲಿತಾಂಶ ನಮ್ಮದೇ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಶೇ.70ರಷ್ಟು ಸ್ಥಾನಗಳಲ್ಲಿ ಗೆದ್ದಿದ್ದೇವೆ ಎಂದು ಫ‌ಡ್ನವಿಸ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಸಮಯ ಸಂಭ್ರಮಾಚರಣೆಯದ್ದು. ಈಗ ವಿಶ್ಲೇಷಣೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ನೋಟಾಕ್ಕೆ ದ್ವಿತೀಯ ಸ್ಥಾನ
ಮಹಾರಾಷ್ಟ್ರದ ಲಾತೂರ್‌ ಗ್ರಾಮೀಣ ಕ್ಷೇತ್ರದಲ್ಲಿ ನೋಟಾಕ್ಕೆ ದ್ವಿತೀಯ ಸ್ಥಾನ ಸಿಕ್ಕಿದೆ. ಪ್ರಸಕ್ತ ಸಾಲಿನಲ್ಲಿ ನೋಟಾ ಪ್ರಮಾಣ ಶೇ.13.06ರಷ್ಟಾಗಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕ ದಿ.ವಿಲಾಸ್‌ ರಾವ್‌ ದೇಶ್‌ ಮುಖ್‌ ಪುತ್ರ ಧೀರಜ್‌ ವಿಲಾಸ್‌ ರಾವ್‌ ದೇಶ್‌ಮುಖ್‌ಗೆ 1,31,321 ಮತಗಳು ಪ್ರಾಪ್ತವಾಗಿದ್ದರೆ (ಶೇ.75.10 ಮತಗಳು), ನೋಟಾಕ್ಕೆ 26, 811 ಮತಗಳು ಸಿಕ್ಕಿವೆ. ಶಿವಸೇನೆ-ಬಿಜೆಪಿ ಅಭ್ಯರ್ಥಿ 13,111 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

Advertisement

ಶೇ.50:50 ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಲಿ
ಚುನಾವಣೆಯಲ್ಲಿ ಬಿಜೆಪಿಗೆ ಹಿಂದಿನ ಬಾರಿಗಿಂತ ಕಡಿಮೆ ಸ್ಥಾನಗಳು ಪ್ರಾಪ್ತಿಯಾಗಿರುವಂತೆಯೇ ಶಿವಸೇನೆ ಶೇ.50:50 ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗ ಬೇಕು ಎಂದು ಒತ್ತಾಯಿಸಿದೆ. ಮುಂಬೈನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಚುನಾವಣೆಗೆ ಸ್ಥಾನ ಹೊಂದಾಣಿಕೆ ಮಾಡುವ ಹಂತದಲ್ಲಿಯೇ ಶೇ.50:50ರ ಅನುಪಾತದಲ್ಲಿಯೇ ಅಧಿಕಾರ ಹಂಚಿಕೆ ಬಗ್ಗೆ ಬಿಜೆಪಿ ಜತೆಗೆ ಮಾತುಕತೆ ನಡೆಸಲಾಗಿತ್ತು ಎಂದಿದ್ದಾರೆ. “ನಾವು ಬಿಜೆಪಿಗಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದೆವು. ಆದರೆ ಪ್ರತಿ ಹಂತದಲ್ಲಿಯೂ ಅವರನ್ನು ಅನುಸರಿಸಿಕೊಂಡು ಹೋಗಲು ಸಾಧ್ಯವಿಲ್ಲ. ನಾನು ಕೂಡ ನನ್ನ ಪಕ್ಷ ಉತ್ತಮ ರೀತಿಯಲ್ಲಿ ಬೆಳವಣಿಗೆ ಸಾಧಿಸಲು ಅವಕಾಶ ಕಂಡುಕೊಳ್ಳಬೇಕಾಗಿದೆ’ ಎಂದಿದ್ದಾರೆ. ಫ‌ಲಿತಾಂಶದ ಬಗ್ಗೆ ಬಿಜೆಪಿ ನಾಯಕರ ಜತೆಗೆ ಮಾತುಕತೆ ನಡೆಸಲಿದ್ದೇವೆ ಎಂದು ಹೇಳಿದ ಅವರು, ಫ‌ಲಿತಾಂಶ ಬಂದಿದೆ. ಇನ್ನು ಯಾವುದೇ ಪ್ರತಿಪಕ್ಷದ ನಾಯಕರು ಇವಿಎಂಗಳ ಬಗ್ಗೆ ಪ್ರಸ್ತಾಪ ಮಾಡಲಾರರು ಎಂದಿದ್ದಾರೆ.

29ರಲ್ಲಿ ನಾಲ್ಕು
ಮುಂಬೈನ 29 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 4ರಲ್ಲಿ ಗೆಲ್ಲುವಲ್ಲಿ ಸಫ‌ಲವಾಗಿದೆ. ಬಾಂದ್ರಾ ಪೂರ್ವದಿಂದ ಶಿವಸೇನೆಯ ಹುರಿಯಾಳಾಗಿದ್ದ ಪ್ರೊ.ವಿಶ್ವನಾಥ್‌ ವಿರುದ್ಧ ಕಾಂಗ್ರೆಸ್‌ನ ಝೀಶನ್‌ ಸಿದ್ಧಿಕಿ ಗೆದ್ದಿದ್ದಾರೆ. ಇಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ನಿವಾಸ ಇದೆ. ಮಲಾಡ್‌ ಪಶ್ಚಿಮ ಕ್ಷೇತ್ರದಿಂದ ಅಸ್ಲಾಂ ಶೇಖ್‌, ವರ್ಷಾ ಗಾಯಕ್ವಾಡ್‌ ಧಾರಾವಿ ಮತ್ತು ಅಮಿನ್‌ ಪಟೇಲ್‌ ಮಹಾದೇವಿ ಕ್ಷೇತ್ರದಿಂದ ಜಯ ಗಳಿಸಿದವರು.

Advertisement

Udayavani is now on Telegram. Click here to join our channel and stay updated with the latest news.

Next