ಚಿಕ್ಕಬಳ್ಳಾಪುರ: ಸಮಾಜದಲ್ಲಿ ಅನ್ಯಾಯ, ಅಸ್ಪೃಶ್ಯತೆ ಹಾಗೂ ಅಸಮಾನತೆ ತೊಡೆದು ಹಾಕಲು ರಾಜ ವೈಭೋಗ ತ್ಯಜಿಸಿ ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದ ಮಹಾಯೋಗಿ ವೇಮನರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ರೂಢಿಸಿಕೊಂಡಾಗ ಮೌಲ್ಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ ತಿಳಿಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮಹಾಯೋಗಿ ವೇಮನರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದರು.
ತತ್ವಾದರ್ಶ ಆದರ್ಶನೀಯ: ವೇಮನರು ರಾಜ ವಂಶಸ್ಥನಾಗಿದ್ದರೂ ಸಾಮಾಜಿಕ ಸಮಾನತೆಗಾಗಿ ವೈಭವಯುತ ಜೀವನ ತ್ಯಾಗ ಮಾಡಿದ ಶ್ರೇಷ್ಠ ದಾರ್ಶನಿಕ. ಮೂಡನಂಬಿಕೆ ಖಂಡಿಸಿ ನಿಜಬದುಕಿನ ಪರಮಸತ್ಯ ತೋರಿದ ಮಹಾ ಸಂತರು. ಅಂತಹ ಮಹಾನ್ ಯೋಗಿಗಳ ತತ್ವಾದರ್ಶ ಪ್ರತಿಯೊಬ್ಬರಿಗೂ ಆದರ್ಶನೀಯ ಎಂದರು. ಪ್ರಜಾಪತಿಯಾಗಿ ಬೆಳಗಿದ ಮಹಾನುಭಾವ ವೇಮನರು ಆಂಧ್ರದಲ್ಲಿ ಜನಿಸಿದವರು.
ತೆಲುಗು ಭಾಷೆಯಲ್ಲಿ ಸಾವಿರಾರು ಪದ್ಯಗಳನ್ನು ರಚಿಸಿದ್ದಾರೆ. ವೇಮನರ ಆಧ್ಯಾತ್ಮಿಕ ಚಿಂತನೆ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ವೇಮನರು ಪ್ರಮುಖ ಪಾತ್ರವಹಿಸಿದರು ಎಂದರು. ತಾಲೂಕು ಕಚೇರಿಯ ಗ್ರೇಡ್ 2 ತಹಶೀಲ್ದಾರ್ ತುಳಸಿ, ಶಿರಸ್ತೇದಾರ ಚಂದ್ರಪ್ಪ, ತಾಲೂಕು ಕಚೇರಿ ಸಿಬ್ಬಂದಿ ಸೇರಿದಂತೆ ಉಪಸ್ಥಿತರಿದ್ದರು.
ಸರಳವಾಗಿ ಜಯಂತಿ ಆಚರಣೆ: ಚಿಕ್ಕಬಳ್ಳಾಪುರ ನಗರಸಭೆಯ 31 ವಾರ್ಡ್‌ಗಳಿಗೆ ಫೆ.9 ರಂದು ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವ ಪ್ರಯುಕ್ತ ಜಾರಿಯಲ್ಲಿರುವ ಸದಾಚಾರ ಸಂಹಿತೆ ಹಿನ್ನೆಲೆಯಲ್ಲಿ ನಗರದ ತಾಲೂಕು ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮಹಾಯೋಗಿ ವೇಮನರ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಲಾಯಿತು. ಯಾವುದೇ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ.