Advertisement

ಮಹಾವೀರರ ಸಂದೇಶಗಳು ಸಾರ್ವಕಾಲಿಕ

01:51 PM Apr 23, 2019 | pallavi |

ಗದಗ: ಜಗತ್ತಿಗೆ ಅಹಿಂಸಾ ಧರ್ಮವನ್ನು ಬೋಧಿಸಿದ ಜೈನ ಧರ್ಮದ 24ನೇ ತೀರ್ಥಂಕರ ಶಾಂತಿದೂತ ಸಂತ, ಭಗವಾನ ಮಹಾವೀರ ಅವರು ನೀಡಿದ ತತ್ವಗಳು ಹಾಗೂ ಸಂದೇಶಗಳು ಸಾರ್ವಕಾಲಿಕ. ನಿತ್ಯ ಜೀವನದಲ್ಲಿ ಅವುಗಳ ಅನುಕರಣೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಜಿಲ್ಲಾ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಡಾ| ರಾಜೇಂದ್ರ ಎಸ್‌. ಗಡಾದ ಹೇಳಿದರು.

Advertisement

ಇಲ್ಲಿನ ಆದರ್ಶ ನಗರದ ಭಗವಾನ ಮಹಾವೀರ ಮಂದಿರದಲ್ಲಿ ಜಿಲ್ಲಾ ಸಿರಿಗನ್ನಡ ವೇದಿಕೆ, ಮಹಿಳಾ ಘಟಕ ಹಾಗೂ ಜಿಲ್ಲಾ ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಾವೀರ ಜಯಂತಿ ಪ್ರಯುಕ್ತ ಮಕ್ಕಳ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಜೈನ ಕವಿಗಳ ಕೊಡುಗೆ ಅಪಾರ. ಮನುಷ್ಯ ಜಾತಿ ತಾನೊಂದೆ ವಲಂ ಎಂದು ಸಾರಿದ ಮಹಾಕವಿ ಪಂಪ, ಗದಾಯುದ್ಧ ಖ್ಯಾತಿಯ ರನ್ನ, ಶಾಂತಿಪುರಾಣ ರಚಿಸಿದ ಪೊನ್ನ ಮೊದಲಾದವರು ಜೈನ ಕವಿಗಳಾಗಿದ್ದು, ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಸಮ್ಯಕ್‌ಜ್ಞಾನ, ಸಮ್ಯಕ್‌ದರ್ಶನ, ಸಮ್ಯಕ್‌ಶ್ರವಣ ಬೋಧಿಸಿದ ಮಹಾವೀರರ ಸಂದೇಶಗಳು ಹಿಂದೆಂದಿಗಿಂತಲು ಇಂದು ಹೆಚ್ಚು ಪ್ರಸ್ತುತವಾಗಿದೆ. ಮಕ್ಕಳಿಗೆ ಇಂತಹ ಮಹಾತ್ಮರನ್ನು ಪರಿಚಯಿಸುವ ಕಾರ್ಯ ನಡೆದಿದ್ದು ತುಂಬಾ ಶ್ಲಾಘನೀಯ ಎಂದರು.

ಜಿಲ್ಲಾ ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಿಡ್ಡಿ ಮಾತನಾಡಿ, ಮಹಾವೀರರು ವಿಶ್ವಕ್ಕೆ ಶಾಂತಿ ಮಂತ್ರ ಬೋಧಿಸಿದರು. ಅಹಿಂಸಾ ಪರಮೋಧರ್ಮ ಎಂದು ಸಾರಿ ತೇಜಸ್ವಿ ನಕ್ಷತ್ರವಾಗಿದ್ದಾರೆ. ಅವರ ತ್ಯಾಗ ಸಂಯಮ, ಸಾಧನೆ, ಅಪರೂಪವಾದ್ದದ್ದು ಎಂದರು.

ಬಳಿಕ ಮಕ್ಕಳಿಂದ ಭಗವಾನ ಮಹಾವೀರ ಕುರಿತು ಮಕ್ಕಳಿಂದ ಕವಿಗೋಷ್ಠಿ ನಡೆಯಿತು. ಜೈನ ಮಹಿಳಾ ಮಂಡಳದ ಹಿರಿಯರಾದ ಶೋಭಾ ಇಂಚಲ, ಬಿ.ಎಸ್‌. ಹಿಂಡಿಯವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next