ವಾಷಿಂಗ್ಟನ್: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲವಾಗಿ ಸಿಖ್-ಅಮೆರಿಕನ್ನರು ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಖಲಿಸ್ತಾನಿ ಪ್ರತ್ಯೇಕತಾವಾದಿ ಸದಸ್ಯರು ವಿರೂಪಗೊಳಿಸಿದ್ದಾರೆ.
ವಾಷಿಗ್ಟಂನ್ ಡಿ.ಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಾರ್ ರ್ಯಾಲಿ ನಡೆಸಿದ ನೂರಾರು ಸಿಖ್ಖರು, ಭಾರತದಲ್ಲಿ ಚಳುವಳಿ ನಿರತ ರೈತರ ಪರವಾಗಿ ಒಗ್ಗಟ್ಟು ಪ್ರದರ್ಶಿಸಿದರು. ಗ್ರೇಟರ್ ವಾಷಿಂಗ್ಟನ್ ಡಿಸಿ, ಮೇರಿಲ್ಯಾಂಡ್, ವರ್ಜೀನಿಯಾ, ನ್ಯೂಯಾರ್ಕ್, ನ್ಯೂಜೆರ್ಸಿ ಉತ್ತರ ಕೆರೋಲಿನಾ ಮುಂತಾದ ಕಡೆಯಿಂದ ಆಗಮಿಸಿದ ಪ್ರತಿಭಟನಾಕಾರರು ಶಾಂತಿಯುತ ಹೋರಾಟ ನಡೆಸುತ್ತಿದ್ದರು.
ಈ ವೇಳೆ ಕೆಲ ಪ್ರತ್ಯೇಕವಾದಿ ಸಿಖ್ಖರು ‘ಖಲಿಸ್ತಾನ್ ರಿಪಬ್ಲಿಕ್’ ಎಂಬ ಧ್ವಜ ಹಿಡಿದು ಘೋಷಣೆ ಕೂಗಿದ್ದಲ್ಲದೆ, ಬಾರತ ವಿರೋಧಿ ಪೋಸ್ಟರ್ ಬ್ಯಾನರ್ ಗಳನ್ನು ಪ್ರದರ್ಶಿಸಿದರು. ಮಾತ್ರವಲ್ಲದೆ ಮಹಾತ್ಮ ಗಾಂಧಿ ಪ್ರತಿಮೆ ಇದ್ದ ಪ್ರಾಂಗಣಕ್ಕೆ ಜಿಗಿದು, ಪೋಸ್ಟರ್ ಗಳನ್ನು ಅಂಟಿಸಿ ಪ್ರತಿಮೆಯನ್ನು ವಿರೂಪಗೊಳಿಸಿದರು. ಪ್ರತಿಭಟನಾಕಾರರ ಸೋಗಿನಲ್ಲಿ ನಡೆದ ಈ ಕೃತ್ಯವನ್ನು ಭಾರತೀಯ ರಾಯಭಾರ ಕಚೇರಿ ಖಂಡಿಸಿದೆ.
ಇದನ್ನೂ ಓದಿ: Top News: ಆಸೀಸ್ ಮಾಧ್ಯಮಗಳಿಂದ ಸಿರಾಜ್‌ಗೆ ಸಲಾಂ; ಹಾರ್ದಿಕ್ ಪಾಂಡ್ಯಗೆ ಫಾದರ್ ಡ್ಯೂಟಿ !
ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕವನ್ನು ಖಲಿಸ್ತಾನಿ ಶಕ್ತಿಗಳು ಅಪವಿತ್ರಗೊಳಿಸಿದವು. ಶಾಂತಿ ಮತ್ತು ನ್ಯಾಯದ ಗುರುತಾಗಿ ಸಾರ್ವತ್ರಿಕವಾಗಿ ಗೌರವಿಸಲ್ಪಟ್ಟ ಗಾಂಧಿ ಪ್ರತಿಮೆಯನ್ನು ಪ್ರತಿಭಟನಾಕಾರರಂತೆ ಬಂದ ಗೂಂಡಾಗಳು ವಿರೂಪಗೊಳಿಸಿದ್ದು ಖಂಡನಾರ್ಹ. ಈ ಕೃತ್ಯವನ್ನು ರಾಯಭಾರ ಕಚೇರಿ ಬಲವಾಗಿ ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.