ಜೋಹಾನ್ಸ್ ಬರ್ಗ್: ಮಹಾತ್ಮಗಾಂಧಿ ಮರಿಮೊಮ್ಮಗ ಸತೀಶ್ ಧುಪೇಲಿಯಾ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ಭಾನುವಾರ ಜೋಹಾನ್ಸ್ ಬರ್ಗ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ನ್ಯೂಮೋನಿಯಾದಿಂದ ಬಳಲುತ್ತಿದ್ದ ಧುಪೇಲಿಯಾ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಕೋವಿಡ್ 19 ಸೋಂಕು ತಗುಲಿರುವುದಾಗಿ ಸಹೋದರಿ ಉಮಾ ಧುಪೇಲಿಯಾ ಮೆಸ್ಥರೈ ತಿಳಿಸಿದ್ದಾರೆ.
ನನ್ನ ಸಹೋದರ ನ್ಯೂಮೋನಿಯಾದಿಂದ ಬಳಲುತ್ತಿದ್ದು ಸುಮಾರು ಒಂದು ತಿಂಗಳ ಬಳಿಕ ವಿಧಿವಶರಾಗಿದ್ದಾರೆ. ಆಸ್ಪತ್ರೆಯಲ್ಲಿದ್ದಾಗಲೇ ಈ ಕೋವಿಡ್ ಸೋಂಕು ತಗುಲಿತ್ತು. ನಂತರ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವುದಾಗಿ ಉಮಾ ಧುಪೇಲಿಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸತೀಶ್ ಧುಪೇಲಿಯಾ ಅವರು ತಮ್ಮ ಹುಟ್ಟು ಹಬ್ಬದ ಮೂರು ದಿನದ ನಂತರ ಸಾವನ್ನಪ್ಪಿರುವುದಾಗಿ ಸಹೋದರಿ ಉಮಾ ತಿಳಿಸಿದ್ದಾರೆ. ಜೋಹಾನ್ಸ್ ಬರ್ಗ್ ನಲ್ಲಿ ಉಮಾ ಜತೆ ವಾಸವಾಗಿದ್ದ ಧುಪೇಲಿಯಾ ತನ್ನ ಮತ್ತೊಬ್ಬ ಸಹೋದರಿ ಕೀರ್ತಿ ಮೆನನ್ ಅವರನ್ನು ಅಗಲಿದ್ದಾರೆ.
ಸತೀಶ್ ಧುಪೇಲಿಯಾ ಅವರು ಮಾಧ್ಯಮದಲ್ಲಿ ಹೆಚ್ಚು ಕಾಲ ವಿಡಿಯೋಗ್ರಾಫರ್ ಮತ್ತು ಫೋಟೋಗ್ರಾಫರ್ ಆಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಸತೀಶ್ ಗಾಂಧಿ ಡೆವಲಪ್ ಮೆಂಟ್ ಟ್ರಸ್ಟ್ ನಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.