ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ
ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಪಕ್ಷ ಶನಿವಾರ ಆಗ್ರಹಿಸಿದೆ. ಗಾಂಧಿ ಬಗ್ಗೆ ಶಾ ಹೇಳಿರುವ ಹೇಳಿಕೆ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶವ್ಯಕ್ತಪಡಿಸಿದೆ.
ಗಾಂಧಿ ಬಗ್ಗೆ ಶಾ ಹೇಳಿದ್ದೇನು?
ಕಾಂಗ್ರೆಸ್ ಪಕ್ಷವನ್ನು ಯಾವುದೇ ಸಿದ್ಧಾಂತದ ನೆಲೆಗಟ್ಟಿನ ಮೇಲೆ ಯಾವತ್ತೂ ಹುಟ್ಟುಹಾಕಿಲ್ಲ ಎಂದು ವಿಶ್ಲೇಷಿಸಿದ ಶಾ, ದೇಶದ ಸ್ವಾತಂತ್ರ್ಯ ಹೋರಾಟದ ವಿಶೇಷ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಲಾಗಿತ್ತು. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೆಂದು ಮಹಾತ್ಮಾಗಾಂಧಿ ಸಲಹೆ ನೀಡಿದ್ದರು.
ಅವರು ತುಂಬಾ ಚತುರ್ ಬನಿಯಾ (ಗಾಂಧಿ ಬುದ್ಧಿವಂತ ಬನಿಯಾ(ಜಾತಿ) ಆಗಿದ್ದರು ಎಂದು ಶಾ ಹೇಳಿದ್ದರು. ಗಾಂಧಿಯನ್ನು ಬುದ್ಧಿವಂತ ಬನಿಯಾ ಎಂದು ಹೇಳಿರುವುದಕ್ಕೆ ಕಾಂಗ್ರೆಸ್ ಶಾ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದೆ.
ಗಾಂಧಿ ಚತುರ್ ಬನಿಯಾ ಆಗಿದ್ದರಿಂದಲೇ ಸ್ವಾತಂತ್ರ್ಯ ಪಡೆದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವಂತೆ ಹೇಳಿದ್ದರು. ಆದರೂ ಪಕ್ಷವನ್ನು ವಿಸರ್ಜಿಸಲಿಲ್ಲ. ಆದರೆ ಈಗ ಕೆಲವರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ನೆಲಕಚ್ಚಿಸಲು ನಾ ಮುಂದು, ತಾ ಮುಂದು ಎಂದು ಮುನ್ನುಗ್ಗುತ್ತಿದ್ದಾರೆ ಎಂದು ಶಾ ಪರೋಕ್ಷವಾಗಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.
2018ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಉದ್ದೇಶಿಸಿರುವ ದೇಶವ್ಯಾಪಿ ಪಕ್ಷ ಸಂಘಟನೆಯ ಅಂಗವಾಗಿ ಛತ್ತೀಸ್ ಗಢಕ್ಕೆ ಆಗಮಿಸಿದ್ದ ವೇಳೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.