ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಗೂ ಸ್ವಾತಂತ್ರ್ಯ ಸಂಗ್ರಾಮಕ್ಕೂ ಅವಿನಾಭಾವ ನಂಟಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿ ಹೋರಾಟಕ್ಕೆ ಹುರುಪು ತುಂಬಿದ್ದರು.
1921, ಅ.1 ಹಾಗೂ 1934, ಮಾ.3ರಂದು ಗಾಂಧೀಜಿ ಬಳ್ಳಾರಿಗೆ ಎರಡು ಬಾರಿ ಭೇಟಿ ನೀಡಿದ್ದರು. ತೆಲುಗು ಮತ್ತು ಕನ್ನಡ ಭಾಷಿಕ ಕಾಂಗ್ರೆಸ್ ಪಕ್ಷದ ಮುಖಂಡರ ಎರಡು ಗುಂಪುಗಳಿದ್ದವು. ಒಮ್ಮೆ ಬಾಪು ಭೇಟಿ ನೀಡಿದಾಗ ನಮ್ಮಲ್ಲಿ ಬರುವಂತೆ ಉಭಯ ಗುಂಪಿನ ನಾಯಕರು ದುಂಬಾಲು ಬಿದ್ದಿದ್ದರು. ಇದರಿಂದ ಬೇಸತ್ತ ಗಾಂಧೀಜಿ ಇಬ್ಬರ ಜತೆಗೂ ಹೋಗದೆ ಬಳ್ಳಾರಿ ರೈಲು ನಿಲ್ದಾಣದಲ್ಲೇ ಸುಮಾರು 8 ಗಂಟೆಗಳ ಕಾಲ ತಂಗಿದ್ದರು. ನಿಲ್ದಾಣದ ಆವರಣದಲ್ಲೇ ಕೆಲವು ಗಂಟೆಗಳ ಕಾಲ ನಿದ್ರೆಗೆ ಜಾರಿ ಬೆಳಗಿನ ಜಾವ ರೈಲು ಮೂಲಕ ಆಂಧ್ರದತ್ತ ತೆರಳಿದ್ದರು. ವಿಶೇಷವೆಂದರೆ ಗಾಂಧಿಧೀಜಿ ಬಳ್ಳಾರಿಯಿಂದ ವಾಪಸ್ ಹೋಗುವಾಗ ಒಬ್ಬನೇ ಒಬ್ಬ ಕಾರ್ಯಕರ್ತನೂ ಇರಲಿಲ್ಲ. ಸ್ವತಃ ತಾವೇ ಟಿಕೆಟ್ ಪಡೆದು ವಾಪಸ್ ತೆರಳಿದ್ದರು. ಈ ವಿಷಯ ವನ್ನು ಟೇಕೂರು ಸುಬ್ರಹ್ಮಣ್ಯಂ ಅವರು 1935ರಲ್ಲಿ ಗಾಂಧೀಜಿ ಅವರನ್ನು ಭೇಟಿಯಾದಾಗ ಸ್ವತಃ ಬಾಪು ಅವರೇ ಪ್ರಸ್ತಾವಿಸಿದ್ದರು ಎಂದು ಸಾಮಾಜಿಕ ಹೋರಾಟಗಾರ ಟಿ.ಜಿ.ವಿಠ್ಠಲ್ ಸ್ಮರಿಸುತ್ತಾರೆ.
ಮೂರು ಜೈಲುಗಳಿವೆ: ಅಂತಾರಾಷ್ಟ್ರೀಯ-ರಾಷ್ಟ್ರೀಯ ಮಟ್ಟದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ, ಸೆರೆಮನೆ ವಾಸದಲ್ಲಿಡಲು ಆಗಿನ ಬ್ರಿಟಿಷ್ ಸರಕಾರ ಕಂಟೋನ್ಮೆಂಟ್ ಪ್ರದೇಶದಲ್ಲಿ ಸುಮಾರು 779 ಎಕರೆ ವಿಸ್ತೀರ್ಣದಲ್ಲಿ ಮೂರು ಜೈಲುಗಳನ್ನು ನಿರ್ಮಿಸಿತ್ತು. ಅಲ್ಲೀಪುರ ಜೈಲು, ಸೆಂಟ್ರಲ್ ಜೈಲು ಹಾಗೂ ಟಿ.ಬಿ.ಸ್ಯಾನಿಟೋರಿಯಂನ ವೆಲ್ಲೆಸ್ಲಿ ಜೈಲು. ಸ್ವಾತಂತ್ರ್ಯ ಹೋರಾಟಗಾರರಾದ ಚಕ್ರವರ್ತಿ ರಾಜಗೋಪಾಲ, ತೆಲುಗು ಭಾಷೆ ಗಾಯಕ ಘಂಟಸಾಲ, ಟರ್ಕಿ ಮಹಾರಾಜರು, ಕಮ್ಯುನಿಸ್ಟ್ ಪಕ್ಷದ ಮುಖಂಡ ಎ.ಕೆ. ಗೋಪಾಲನ್ ಸೇರಿದಂತೆ ಇತರರನ್ನು ಬಂಧಿಸಿ ಈ ಮೂರು ಜೈಲುಗಳಲ್ಲಿ ಇರಿಸಲಾಗಿತ್ತು.
ಚಿತಾಭಸ್ಮದ ದರ್ಶನ: 1948ರಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಗಾಂಧಿಧೀಜಿ ಚಿತಾಭಸ್ಮವನ್ನು ಬಳ್ಳಾರಿ ನಗರದ ಗಾಂಧಿಭವನದ ಮಲ್ಲಸಜ್ಜನ ವ್ಯಾಯಾಮ ಶಾಲೆ ಆವರಣದಲ್ಲಿ 24 ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಂದ ಜಿಲ್ಲೆಯ ತಾಲೂಕಾದ ಕೂಡ್ಲಿಗಿಯಲ್ಲಿ ಆ ಚಿತಾಭಸ್ಮವನ್ನು ಸ್ಥಾಪಿಸಲಾಗಿದೆ.
· ವೆಂಕೋಬಿ ಸಂಗನಕಲ್ಲು