Advertisement

ಮಹಾತ್ಮಾ ಗಾಂಧಿ ಸಮ್ಮಾನ್‌ ಪ್ರಶಸ್ತಿ ಪ್ರದಾನ 

06:00 AM Oct 27, 2018 | Team Udayavani |

ಮಂಗಳೂರು: ಹೊಸದಿಲ್ಲಿಯ ಎನ್‌ಆರ್‌ಐ ವೆಲ್‌ಫೇರ್‌ ಸೊಸೈಟಿ ಆಫ್‌ ಇಂಡಿಯಾ ವತಿಯಿಂದ ಲಂಡನ್ನಿನ ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ನಡೆದ ಗ್ಲೋಬಲ್‌ ಇಂಡಿಯನ್‌ ಶೃಂಗ ಸಭೆಯಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಹಾಗೂ
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ ಪ್ರತಿಷ್ಠಿತ ಮಹಾತ್ಮಾ ಗಾಂಧಿ ಸಮ್ಮಾನ್‌ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗುರುವಾರ ಯುನೈಟೆಡ್‌ ಕಿಂಗ್‌ಡಂನ ರಾಜ್ಯ ಉದ್ಯೋಗ ಖಾತೆ ಸಚಿವರಾದ ಅಲೋಕ್‌ ಶರ್ಮಾ ಅವರು ಪ್ರದಾನ ಮಾಡಿದರು.

Advertisement

ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ಬ್ಯಾಂಕಿಂಗ್‌ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಅವರದು. 105 ಶಾಖೆಗಳಲ್ಲಿ ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ಈ ಬ್ಯಾಂಕ್‌ ನೀಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮಾನವಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ್ನು ರೂಪುಗೊಳಿಸಿದ |
ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. 24 ವರ್ಷಗಳ ಸುದೀರ್ಘ‌ ಅವಧಿಯಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ್ನು ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಹಲವಾರು ವಿನೂತನ ಯೋಜನೆಗಳ ಮೂಲಕ ಈ ಬ್ಯಾಂಕ್‌ನ್ನು ಜನಸ್ನೇಹಿ ಬ್ಯಾಂಕನ್ನಾಗಿ ಪರಿವರ್ತಿಸುವಲ್ಲೂ ಯಶಸ್ವಿಯಾಗಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದು ಸಹಕಾರಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲೇ ಅಪೂರ್ವವೆನಿಸಿದ ಸಾಧನೆಯನ್ನು ಮಾಡಿದ್ದಾರೆ. ಇವರು ಎಸ್‌.ಸಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡಾಗ ಕೇವಲ 25 ಶಾಖೆಗಳಿದ್ದು, ಒಟ್ಟು ಠೇವಣಿ 64 ಕೋಟಿ.ರೂ., ಹೊರಬಾಕಿ ಸಾಲ 46 ಕೋಟಿ.ರೂ.,ಲಾಭ 42 ರೂ.ಲಕ್ಷ ಮಾತ್ರ ಇತ್ತು. ಆದರೆ, ಈಗ ಬ್ಯಾಂಕ್‌ 105 ಶಾಖೆಗಳನ್ನು ಹೊಂದಿದ್ದು, ಬ್ಯಾಂಕಿನ ಠೇವಣಿ 3,561.24 ಕೋಟಿ ರೂ.ಆಗಿದೆ.  ಬ್ಯಾಂಕ್‌ 2,778.30 ಕೋಟಿ ರೂ.ಮುಂಗಡ ನೀಡಿದ್ದು, ಒಟ್ಟು ವ್ಯವಹಾರ 6,748.84 ಕೋಟಿ ರೂ.ಆಗಿದೆ. ಲಾಭ ರೂ.28.60 ಕೋಟಿಯಾಗಿದೆ. ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಇವರು ಕಾರಣರಾಗಿದ್ದಾರೆ.

ರಾಜೇಂದ್ರ ಕುಮಾರ್‌ ಅಧ್ಯಕ್ಷರಾದ ಬಳಿಕ ಬ್ಯಾಂಕಿಗೆ 19 ವರ್ಷಗಳಿಂದ ರಾಜ್ಯದ ಅತ್ಯುತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಎಂದು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಪ್ರಶಸ್ತಿ ಹಾಗೂ 17 ವರ್ಷಗಳಿಂದ ನಬಾರ್ಡ್‌ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಬ್ಯಾಂಕಿಂಗ್‌ ಪೊಟಿಯರ್, ಮುಂಬೈ ಇವರು ನೀಡಿದ ಬೆಸ್ಟ್‌ ಚೇರ್‌ಮನ್‌ ನ್ಯಾಷನಲ್‌ ಅವಾರ್ಡ್‌ನ್ನು ಪಡೆದಿದ್ದಾರೆ. ಲಂಡನ್ನಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡ, ಯುನೈಟೆಡ್‌ ಕಿಂಗ್‌ಡಂನ ಪಾರ್ಲಿಮೆಂಟ್‌ ಸದಸ್ಯರಾದ ವೀರೇಂದ್ರ ಶರ್ಮಾ, ಪ್ರೀತಿ ಗಿಲ್‌, ಯುನೈಟೆಡ್‌ ಕಿಂಗ್‌ ಡಂನ ಮೇಯರ್‌ ಹರ್ಷದ್‌ ಮೊಹಮ್ಮದ್‌ ಹಾಗೂ ಎನ್‌ಆರ್‌ಐ ವೆಲ್‌ಫೇರ್‌ ಸೊಸೈಟಿ ಆಫ್‌ ಇಂಡಿಯಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next