Advertisement

ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರೂ “ನರೇಗಾ’ಕೂಲಿಗಳು !

01:04 AM Jan 29, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಸ್ಥಳೀಯ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಸದಸ್ಯರೂ ಕೂಲಿಯಾಳುಗಳಾಗಿ ಇತರರಿಗೆ ಪ್ರೇರಣೆಯಾಗಿದ್ದಾರೆ.

Advertisement

ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರು ತಾವಾಗಿ ಯೇ ನರೇಗಾ ಉದ್ಯೋಗ ಚೀಟಿ ಮಾಡಿಸಿಕೊಂಡು ಕೂಲಿ ಮಾಡುವ ಮೂಲಕ ನರೇಗಾಕ್ಕೆ ಸ್ಥಳೀಯರನ್ನು ಸೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಹಾಲಿ/ ಮಾಜಿ ಸೇರಿದಂತೆ ಪ್ರಸ್ತುತ 2,139 ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರು ಜಾಬ್‌ಕಾರ್ಡ್‌ ಹೊಂದಿದ್ದಾರೆ. ಇದರಲ್ಲಿ 1,906 ಗ್ರಾ.ಪಂ. ಸದಸ್ಯರು, 68 ತಾ.ಪಂ. ಮತ್ತು 14 ಜಿ.ಪಂ. ಸದಸ್ಯರಿದ್ದಾರೆ. ಈ ಮೂಲಕ ನರೇಗಾದ ಸ್ಥಳೀಯ “ರಾಯಭಾರಿ’ ಗಳಾಗಿಯೂ ಗುರುತಿಸಿಕೊಂಡಿದ್ದಾರೆ.

ಶೇ. 100ಕ್ಕೂ ಅಧಿಕ ಸಾಧನೆ
2020-21ನೇ ಆರ್ಥಿಕ ವರ್ಷದಲ್ಲಿ ದ.ಕ. ಜಿಲ್ಲೆಗೆ 16 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿತ್ತು. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 52 ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ. ಈ ಮೂಲಕ ದ.ಕ. ಜಿಲ್ಲೆ ಮೊದಲ ಬಾರಿಗೆ ಶೇ. 100ಕ್ಕಿಂತಲೂ ಹೆಚ್ಚು ಸಾಧನೆ ದಾಖಲಿಸಿದೆ.

ಲಾಕ್‌ಡೌನ್‌ನಲ್ಲಿ ಬೇಡಿಕೆ ಹೆಚ್ಚಳ
2021-22ರಲ್ಲಿ ಜಿಲ್ಲೆಗೆ ಒಟ್ಟು 16 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿತ್ತು. ಆದರೆ ಲಾಕ್‌ಡೌನ್‌ ಸಂದರ್ಭ ಊರಿಗೆ ವಾಪಸಾಗಿದ್ದ ಯುವಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯಲ್ಲಿ ತೊಡಗಿಕೊಂಡ ಕಾರಣ ನರೇಗಾಕ್ಕೆ ಮತ್ತಷ್ಟು ಬೇಡಿಕೆ ವ್ಯಕ್ತವಾಗಿತು. ಮಾನವ ದಿನಗಳ ಸೃಜನೆಯು ಹೆಚ್ಚುತ್ತಾ ಹೋಯಿತು. ಹೆಚ್ಚುವರಿಯಾಗಿ 2.10 ಲಕ್ಷ ಮಾನವ ದಿನಗಳನ್ನು ನಿಗದಿಪಡಿಸಲಾಯಿತು.

ಸದ್ಯ ಈ ಆರ್ಥಿಕ ವರ್ಷದ ಒಟ್ಟು ಮಾನವ ದಿನಗಳ ಸೃಜನೆಯ ಗುರಿ 18.10 ಲಕ್ಷ ಆಗಿದ್ದು ಇದುವರೆಗೆ 15,96,778 ಮಾನವ ದಿನ ಸೃಜಿಸಲಾಗಿದೆ. “ನರೇಗಾ’ ಯೋಜನೆಯಡಿ ವರ್ಷಕ್ಕೆ 100 ದಿನಗಳ ಕೆಲಸದ ಭರವಸೆಯಿದ್ದು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಹಾಯವಾಗುವಂತೆ 275 ರೂ. ಇದ್ದ ಕೂಲಿ ಮೊತ್ತವನ್ನು 289 ರೂ.ಗಳಿಗೆ ಹೆಚ್ಚಿಸಲಾಗಿದೆ.

Advertisement

ಸದಸ್ಯರ ಮಾದರಿ ನಡೆ
ನರೇಗಾದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಕೂಡ ಉದ್ಯೋಗ ಚೀಟಿ ಪಡೆಯಲು ಅವಕಾಶವಿದ್ದು, ಅನೇಕ ಮಂದಿ ಉದ್ಯೋಗ ಚೀಟಿ ಪಡೆದು ಕೂಲಿಗಳಾಗಿ ಮಾದರಿಯಾಗಿದ್ದಾರೆ. ಜಿಲ್ಲೆಯಲ್ಲಿ ನರೇಗಾದ ಯಶಸ್ಸಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಕೊಡುಗೆ ಗಮನಾರ್ಹ.
-ಡಾ| ಕುಮಾರ್‌,
ದ.ಕ. ಜಿ.ಪಂ. ಸಿಇಒ

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next