Advertisement

ನರೇಗಾ ಹಣಕ್ಕೆ ಪಂಚ ನಿಯಮ ಕಡ್ಡಾಯವಾಗಿ ಪಾಲಿಸಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ

12:54 AM Sep 07, 2022 | Team Udayavani |

ಹೊಸದಿಲ್ಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಅಡಿ ಹಣ ಬಿಡುಗಡೆ ಮಾಡ ಬೇಕೇ? ಹಾಗಿದ್ದರೆ ಐದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಹೀಗೆಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಎಲ್ಲ ರಾಜ್ಯ ಸರಕಾರಗಳಿಗೆ ಪತ್ರ ರವಾನೆಯಾಗಿದೆ.

Advertisement

ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವರು ಕೇಂದ್ರ ಮನರೇಗಾ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಇತ್ತೀಚೆಗೆ ಆರೋಪಿಸಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ. ಮನರೇಗಾ ಅಡಿಯಲ್ಲಿ ರಾಜ್ಯಗಳಿಗೆ ಹಣ ಸಿಗಬೇಕೆಂದರೆ ಕೇಂದ್ರ ಸರಕಾರ ಮಾಡಿರುವಂತಹ ನಿಯಮಗಳನ್ನು ಪಾಲಿಸಿ, ಅದರ ವರದಿ ಕೊಡಬೇಕು. ಅವುಗಳನ್ನು ಮುಂದಿನ ತಿಂಗಳು ಪರಿಶೀಲಿಸಿ, ಬಾಕಿ ಮೊತ್ತ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಗ್ರಾಮೀಣಾ ಭಿವೃದ್ಧಿ ಸಚಿವ ಗಿರಿರಾಜ್‌ ಸಿಂಗ್‌ ಪತ್ರದಲ್ಲಿ ಸೂಚಿಸಿದ್ದಾರೆ.

ಕರ್ನಾಟಕದಲ್ಲಿ 4,679 ಗುಂಪು: ಪ್ರತೀ ಗ್ರಾಮವು ನರೇಗಾ ವಿಚಾರದಲ್ಲಿ ವಾಟ್ಸ್‌ಆ್ಯಪ್‌ ಗುಂಪು ರಚಿಸಿಕೊಳ್ಳಬೇಕೆಂದು ಕೇಂದ್ರ ಹೇಳಿದೆ. ಈ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮುಂಚೂಣಿ ಯಲ್ಲಿವೆ. ಸದ್ಯ ಆಂಧ್ರದಲ್ಲಿ 13,114 ಗ್ರಾಮ ಪಂಚಾಯತ್‌ಗಳಿದ್ದು, ಅದರಲ್ಲಿ 12,675 ಪಂಚಾಯತ್‌ಗಳಲ್ಲಿ ಗುಂಪುಗಳನ್ನು ರಚಿಸಲಾಗಿದೆ. ಕರ್ನಾಟಕದಲ್ಲಿ 6,017 ಗ್ರಾಮ ಪಂಚಾಯತ್‌ಗಳಿದ್ದು, ಈ ಪೈಕಿ 4,679 ಪಂಚಾಯತ್‌ಗಳಲ್ಲಿ ವಾಟ್ಸ್‌ಆ್ಯಪ್‌ ಗುಂಪು ರಚನೆಯಾಗಿದೆ.

ಐದು ನಿಯಮಗಳೇನು?
1 ಸಾಮಾಜಿಕ ಆಡಿಟ್‌  - ಗ್ರಾ.ಪಂ. ವ್ಯಾಪ್ತಿಯಲ್ಲಿ ಯೋಜನೆಯಡಿ ಯಾವ ಕೆಲಸಗಳು ಆಗಿವೆ ಎಂಬುದರ ಪರಿಶೀಲನೆ. ಹಣಕಾಸಿನ ಅವ್ಯವಹಾರ ಉಂಟಾಗಿದೆಯೇ ಎಂಬುದರ ತನಿಖೆ. ಇಂಥ ಅಡಿಟ್‌ ತಂಡಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
2 ಓಂಬುಡ್ಸ್‌ಪರ್ಸನ್‌- ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಂಬುಡ್ಸ್‌ಪರ್ಸನ್‌ ನೇಮಕವನ್ನು ಕಾಲಮಿತಿಯಲ್ಲಿ ಮಾಡಬೇಕು.
3 ನ್ಯಾಶನಲ್‌ ಮೊಬೈಲ್‌ ಮಾನಿಟರಿಂಗ್‌ ಸಿಸ್ಟಮ್‌  - ಕಾರ್ಮಿಕರು ಹಾಜರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ. ಅದರಲ್ಲಿ ಜಿಯೋ ಟ್ಯಾಗ್‌ ಮಾಡಿದ ಫೋಟೋಗಳನ್ನು ಅಪ್‌ಲೋಡ್‌ ಮಾಡಬೇಕು.
4 ಏರಿಯಾ ಅಧಿಕಾರಿ- ಸ್ಥಳ ಪರಿಶೀಲನೆಗೆ ನೇಮಕಗೊಂಡ ರಾಜ್ಯ ಮಟ್ಟದ ಅಧಿಕಾರಿಗಳು ಯೋಜನೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಪ್ರತೀ ತಿಂಗಳಿಗೆ ಕನಿಷ್ಠ 10 ಸ್ಥಳಗಳಿಗೆ ಭೇಟಿ ನೀಡಬೇಕು.
5 ವಾಟ್ಸ್‌ಆ್ಯಪ್‌ ಗ್ರೂಪ್‌- ಪ್ರತೀ ಗ್ರಾ.ಪಂ.ಗಳಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳನ್ನು ರಚಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next