ಸುರಪುರ: ಪಟ್ಟಣದ ಹೃದಯ ಭಾಗದಲಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ವೃತ್ತವನ್ನು ನಗರಸಭೆ ಅಧ್ಯಕ್ಷ ಮತ್ತು ಅಧಿಕಾರಿಗಳು ಸೇರಿ ಧ್ವಂಸಗೊಳಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ರಾಜಾ ರಾಮಪ್ಪ ನಾಯಕ ಜೇಜಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ನಗರ ಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನು ಅಪಮಾನಿಸಿಲ್ಲ. ಆ ಉದ್ದೇಶವು ನನಗಿಲ್ಲ. ಮಹಾತ್ಮ ಗಾಂಧೀಜಿ ಡಾ| ಅಂಬೇಡ್ಕರ್ ಸೇರಿದಂತೆ ರಾಷ್ಟ್ರ ಪುರಷರು, ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ಗೌರವವಿದೆ. ಧ್ವಂಸ ಮಾಡಿದ್ದಾರೆ ಎಂಬ ಹೇಳಿಕೆ ನೋವುಂಟು ಮಾಡಿದೆ. ಧ್ವಂಸ ಮಾಡುವಷ್ಟು ಕೀಳು ಮಟ್ಟಕ್ಕೆ ಇಳಿದಿಲ್ಲ, ಪೊಲೀಸರ ಸಮ್ಮುಖದಲ್ಲಿ ಗೌರಯುತವಾಗಿ ತೆರವುಗೊಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
2016-17ನೇ ಸಾಲಿನ ಆಡಳಿತ ಮಂಡಳಿ ವೃತ್ತ ನವೀಕರಣಕ್ಕೆ ನಿರ್ಣಯ ಕೈಗೊಂಡಿದ್ದು, ಎಸ್‌ಎಫ್‌ಸಿ 7.2 ಯೋಜನೆ ಅಡಿ 8.68 ಲಕ್ಷ ಅನುದಾನ ಮೀಸಲಿಟ್ಟಿತ್ತು. ಇಲ್ಲಿಯವರೆಗೆ ಕಾರ್ಯಗತವಾಗಿರಲಿಲ್ಲ. ಅದನ್ನು ಅನುಷ್ಠಾನಕ್ಕೆ ತಂದಿದ್ದೇವೆ. ನನ್ನ ಅವಧಿಯಲ್ಲಿ ಮಾಡಿದ ಯೋಜನೆ ಅಲ್ಲ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗೆ ಅಡ್ಡಿಪಡಿಸುವುದು, ಆರೋಪ ಮಾಡುವುದು ಅವರ ಜಾಯಮಾನ, ಆರೋಪದ ಹಿಂದೆ ಬೇರೆ ಉದ್ದೇಶವಿದೆ ಇದಕ್ಕೆಲ್ಲ ಹೆದರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆದು ಟೆಂಡರ್ ಕರೆದಿದ್ದೇವೆ. ಗುತ್ತಿಗೆದಾರರು ಕಾಮ ಗಾರಿ ನಿರ್ವಹಿಸುತ್ತಾರೆ ಗುಣಮಟ್ಟ ವೀಕ್ಷಿಸಲು ಉಸ್ತುವಾರಿ ಮಾಡುತ್ತಿದ್ದೇನೆ. ಮೂರ್ತಿಯನ್ನು ಉಗ್ರಾಣದಲ್ಲಿ ಬಿಸಾಕಿದ್ದಾರೆ ಎಂಬುದು ಸುಳ್ಳು. ಬಿಸಾಕಿಲ್ಲ ಸೂಕ್ತವಾದ ಸ್ಥಳದಲ್ಲೇ ಇರಿಸಿದ್ದೇವೆ, ಸಿಂಬ್ಬಂದಿಗೆ ಜವಾಬ್ದಾರಿ ವಹಿಸಿದ್ದು, ನಿತ್ಯ ಪೂಜಿಸಲಾಗುತ್ತಿದೆ. ಮೂರ್ತಿಯನ್ನು ಗೌರವದಿಂದ ನೋಡಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದರು.
ಉಪಾಧ್ಯಕ್ಷ ಮಹೇಶ ಪಾಟೀಲ, ಸದಸ್ಯರಾದ ಶಿವುಕುಮಾರ ಕಟ್ಟಿಮನಿ, ಮಾನಪ್ಪ ಚಳ್ಳಿಗಿಡ, ಮಹಮದ್‌ಗೌಸ್ ಕಿಣ್ಣಿ, ಮಲ್ಲೇಶ ಪೂಜಾರಿ, ನಗರಸಭೆ ವ್ಯವಸ್ಥಾಪಕ ಯ್ಲಪ್ಪನಾಯಕ, ಎಇಇ ಶಾಂತಪ್ಪ ಇತರರಿದ್ದರು.