Advertisement

ಬಜೆಟ್‌ನಲ್ಲಿ ಗಾಂಧಿ ಹತ್ಯೆ ಚಿತ್ರ ; ವಿವಾದ ತಂದಿಟ್ಟ ಎಲ್‌ಡಿಎಫ್ ಸರಕಾರದ ನಿರ್ಧಾರ

10:07 AM Feb 09, 2020 | Hari Prasad |

ತಿರುವನಂತಪುರ: ಪ್ರಸಕ್ತ ಸಾಲಿನ ಕೇರಳ ಬಜೆಟ್‌ ಪುಸ್ತಕದ ಮುಖಪುಟದಲ್ಲಿ ಮಹಾತ್ಮ ಗಾಂಧಿ ಹತ್ಯೆಯ ವರ್ಣಚಿತ್ರವನ್ನು ಮುದ್ರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿತ್ತ ಸಚಿವ ಥಾಮಸ್‌ ಐಸಾಕ್‌ ‘ಬಾಪುವನ್ನು ಕೊಂದವರು ಯಾರು ಎನ್ನುವುದನ್ನು ನಾವು ಮರೆಯುವುದಿಲ್ಲ’ ಎಂಬ ಸಂದೇಶ ಸಾರಿದ್ದೇವೆ ಎಂದಿದ್ದಾರೆ.

Advertisement

ಜನಪ್ರಿಯ ಚಿತ್ರ ಕಲಾವಿದ ಟಾಮ್‌ ವಟ್ಟಕ್ಕುಳಿ ರಚಿಸಿರುವ ಚಿತ್ರದಲ್ಲಿ, ನಾಥೂರಾಂ ಗೋಡ್ಸೆ ಗುಂಡು ಹಾರಿಸಿದ ಬಳಿಕ ಗಾಂಧಿ ನೆಲದಲ್ಲಿ ಬಿದ್ದಿರುವ, ಅವರ ದೇಹದಿಂದ ರಕ್ತ ಹೊರಬರುತ್ತಿರುವ ಹಾಗೂ ಸುತ್ತಮುತ್ತ ಅಭಿಮಾನಿಗಳು ರೋದಿಸುತ್ತಿರುವ ದೃಶ್ಯವಿದೆ. ‘ಮಹಾತ್ಮ ಅವರನ್ನು ಹಿಂದೂ ಕೋಮುವಾದಿಗಳು ಹತ್ಯೆ ಮಾಡಿದ್ದಾರೆ. ಜನರು ಇದನ್ನು ಯಾವತ್ತೂ ಮರೆಯುವುದಿಲ್ಲ’ ಎಂಬ ಅಂಶವನ್ನು ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರ ಸಾಬೀತುಪಡಿಸಲು ಇಚ್ಛಿಸುತ್ತಿದೆ ಎಂದು ಐಸಾಕ್‌ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ, ‘ಆರೆಸ್ಸೆಸ್‌-ಬಿಜೆಪಿ ವಿರುದ್ಧ ನಾವು ಹೋರಾಡುತ್ತಿರುವುದು ನಿಜ. ಹಾಗಂತ, ಈ ಚಿತ್ರವನ್ನು ಬಜೆಟ್‌ನಲ್ಲಿ ಮುದ್ರಿಸುವ ಅಗತ್ಯ ಇರಲಿಲ್ಲ’ ಎಂದಿದ್ದಾರೆ. ಮಹಾತ್ಮನನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿದ್ದು ತಪ್ಪು ಎಂದು ಐಯುಎಂಎಲ್‌ ನಾಯಕ ಎಂಕೆ ಮುನೀರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next