Advertisement

ನಾಡಿನೆಲ್ಲೆಡೆ ಸಂಭ್ರಮದ ಮಹಾಶಿವರಾತ್ರಿ

10:21 PM Feb 21, 2020 | mahesh |

ಕುಂದಾಪುರ: ತಾಲೂಕಿನ ವಿವಿಧೆಡೆ ಶುಕ್ರವಾರ ಮಹಾಶಿವರಾತ್ರಿ ಆಚರಿಸಲಾಯಿತು. ಶಿವ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿ ನಂದಾದೀಪಕ್ಕೆ ತೈಲ ಪೂರಣ ಮಾಡಿದರು. ಶಿವನಿಗೆ ಇಷ್ಟವಾದ ಎಕ್ಕದ (ಅರ್ಕ) ಹೂವಿನ ಮಾಲೆಗಳನ್ನು ಶಿವನಿಗೆ ಅರ್ಪಿಸಿದರು. ರುದ್ರಾಭಿಷೇಕಗಳನ್ನು ಮಾಡಿಸಿದರು.

Advertisement

ಶಿವಾಲಯಗಳಲ್ಲಿ ಶತರುದ್ರಾಭಿಷೇಕ, ರುದ್ರಾರ್ಚನೆ, ರುದ್ರ ಪಾರಾಯಣ ನಡೆಯಿತು. ಭಜನೆ ಸೇವೆ ನಡೆಯಿತು. ವಿವಿಧ ದೇವಸ್ಥಾನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಜೆ ಜಾಗರಣೆ ಸಲುವಾಗಿ ಭಜನೆ, ಪಾರಾಯಣ, ಶಿವನಾಮ ಜಪ ನಡೆದವು. ಶಿವರಾತ್ರಿ ಉಪವಾಸದ ನಿಮಿತ್ತ ಉಪಾಹಾರ, ಫ‌ಲಾಹಾರದ ವ್ಯವಸ್ಥೆಯನ್ನು ಬಹುತೇಕ ಕಡೆ ಮಾಡಲಾಗಿತ್ತು. ದೇವಾಲಯಗಳಲ್ಲಿಯೂ ಪುಷ್ಪಾಲಂಕಾರ, ದೇವರ ವಿಗ್ರಹಕ್ಕೆ, ಶಿವಲಿಂಗಕ್ಕೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು.

ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇಗುಲ
ಕೆರಾಡಿ: ಇಲ್ಲಿನ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶತ ರುದ್ರಾಭಿಷೇಕ, ಜಾಗರಣೆ, ಭಜನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.  ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶ್ರೀ ಕೇಶವ ನಾಥೇಶ್ವರನಿಗೆ ವಿಶೇಷ ಪೂಜೆ, ಶತರುದ್ರಾಭಿಷೇಕ, ಭಕ್ತರಿಂದ ಭಜನಾ ಸೇವೆ, ಮತ್ತಿತರ ಸೇವೆಗಳು ನಡೆದವು. ನೂರಾರು ಭಕ್ತರು ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.

ಸುಮಾರು 50 ಅಡಿಗಳಷ್ಟು ದೂರದ ಕಲ್ಲಿನ ಗುಹೆಯೊಳಗೆ ಉದ್ಭವ ಲಿಂಗ ಇಲ್ಲಿನ ವೈಶಿಷ್ಟವಾಗಿದ್ದು, ಸುಮಾರು 50 ಅಡಿಗಳಷ್ಟು ವಿಶಾಲ ಜಾಗದಲ್ಲಿ ಹರಡಿರುವ ನೀರು, ಆ ನೀರಿನಲ್ಲಿ ಹಲವು ಬಗೆಯ ಮೀನುಗಳು, ಕತ್ತಲು ತುಂಬಿದ ಗುಹೆಯೊಳಗೆ ಕೇವಲ ದೇವರ ದೀಪದ ಬೆಳಕು ಬಿಟ್ಟರೆ ಬೇರೆ ಬೆಳಕಿನ ವ್ಯವಸ್ಥೆ ಇಲ್ಲ. ಕಾಡಿನೊಳಗೆ ದುರ್ಗಮವಾದ ರಸ್ತೆಯಲ್ಲಿ ಬರಬೇಕಿದ್ದರೂ ಅನೇಕ ಮಂದಿ ಭಕ್ತರು ಇಲ್ಲಿ ಪೂಜೆ ಸಲ್ಲಿಸಿದರು.

ಕೊಡಪಾಡಿಯ ಶ್ರೀ ಗುಹೇಶ್ವರ ದೇವಸ್ಥಾನ
ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಕೊಡಪಾಡಿಯ ಶ್ರೀ ಗುಹೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಶತ ರುದ್ರಾಭಿಷೇಕ, ಭಜನೆ, ಜಾಗರಣೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಈ ಮೊದಲು ಇಲ್ಲಿ ಶಿವರಾತ್ರಿಯ ದಿನದಂದು ಗುಹೆ ಪ್ರವೇಶಿಸಿ ಶಿವನ ದರ್ಶನ ಪಡೆಯುವ ಅವಕಾಶವಿತ್ತು. ಶ್ರೀ ಗುಹೇಶ್ವರನ ಸನ್ನಿಧಾನದಲ್ಲಿ ನಡೆದ ಸ್ವರ್ಣಾರೂಢ ಪ್ರಶ್ನೆ ಚಿಂತನೆಯಲ್ಲಿ ಗುಹಾ ಪ್ರವೇಶ ಸಾರ್ವಜನಿಕವಾಗಿ ನಿಷೇಧಿಸಬೇಕೆಂಬ ಸೂಚನೆ ದೊರಕಿರು ವುದರಿಂದ ಭಕ್ತರಿಗೆ ಪ್ರವೇಶ ನಿಷೇಧಿಸ ಲಾಗಿದೆ. ಈ ಬಾರಿಯು ಭಕ್ತರಿಗೆ ಗುಹಾ ಪ್ರವೇಶದ್ವಾರದಲ್ಲಿ ಶಿವನಿಗೆ ಪೂಜಾರ್ಚನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.

Advertisement

ಗಣಪತಿಹೋಮ, ರುದ್ರಾಭಿಷೇಕ ಆರಂಭಗೊಂಡು ಬಳಿಕ ಆಹ್ವಾನಿತ ಭಜನಾ ತಂಡಗಳಿಂದ ನಿರಂತರ ಭಜನೆ ಕಾರ್ಯಕ್ರಮ ನಡೆಯಿತು. ಸಂಜೆ ದೇಗುಲದಿಂದ ದೀಪವನ್ನು ಮೆರವಣಿಗೆ ಮೂಲಕ ಹಣಬಿನ ಗದ್ದೆಗೆ ಕೊಂಡೊಯ್ದು, ಹಣಬಿನ ಸೇವೆ, ಗೋಪಾಲಕೃಷ್ಣ ದೇವರಿಗೆ ಸಮಿತಿಯಿಂದ ವಿಶೇಷ ಪೂಜೆ ನಡೆಯಿತು.

ಸಹಸ್ರಾರು ಭಕ್ತರು ಭಾಗಿ
20 ಅಡಿ ಉದ್ದದ ಮುರಕಲ್ಲಿನ ಗುಹೆಯೊಳಗೆ ಅಂತರ್ಗತವಾಗಿರುವ ಶ್ರೀ ಗುಹೇಶ್ವರನ ಸನ್ನಿಧಾನಕ್ಕೆ ಮಹಾಶಿವರಾತ್ರಿ ಪ್ರಯುಕ್ತ ಸಹಸ್ರಾರು ಭಕ್ತರು ಆಗಮಿಸಿ, ಪೂಜೆ ಸಲ್ಲಿಸಿ, ದೇವರ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು, ಸದಸ್ಯರು, ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಶ್ರೀ ಕೋಟಿಲಿಂಗೇಶ್ವರ ದೇಗುಲ
ಕೋಟೇಶ್ವರ: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಕೋಟಿಲಿಂಗೇಶ್ವರ ದೇಗುಲದಲ್ಲಿ ಫೆ. 21ರಂದು ನೆರೆದ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದ ಶಿವರಾತ್ರಿ ಉತ್ಸವ ಜರಗಿತು. ಬೆಳಗ್ಗೆ ಶಿವ ಸಹಸ್ರ ನಾಮಾವಳಿ ಪಠಣ, ಮಹಾಪೂಜೆಯು ಪ್ರಧಾನ ಅರ್ಚಕ ಪ್ರಸನ್ನ ಕುಮಾರ ಐತಾಳ ಅವರ ನೇತೃತ್ವದಲ್ಲಿ ನಡೆಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಾಗರಣೆಯ ಅಂಗವಾಗಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8ರ ತನಕ ವಿವಿಧ ಭಜನ ತಂಡಗಳಿಂದ ಅಖಂಡ ಭಜನೆ ನಡೆಯಿತು. ರಾತ್ರಿ ದೊಡ್ಡ ರಂಗಪೂಜೆ ಹಾಗೂ ಸಣ್ಣ ರಥೋತ್ಸವ ನಡೆಯಿತು. ದೇಗುಲದ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ, ಆಡಳಿತ ಮಂಡಳಿ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next