ಇಡೀ ಜಗತ್ತಿನ ಯಾವುದೇ ದೇಶಗಳ ಇತಿಹಾಸ, ಸಂಸ್ಕೃತಿಯನ್ನು ಪರಿಶೀಲಿಸಿದರೂ ಭಾರತೀಯರಲ್ಲಿ ಕಾಣುವ ದೇವ ವೈವಿಧ್ಯತೆಯನ್ನು ಕಾಣಲು ಸಾಧ್ಯವಿಲ್ಲ. ಇಲ್ಲಿ ಯಾವುದು ದೇವರಲ್ಲ ಹೇಳಿ? ಅಣುರೇಣುತೃಣಕಾಷ್ಠ… ಅಣುವಿನಲ್ಲಿ, ಧೂಳಿನ ಕಣಗಳಲ್ಲಿ, ಹುಲ್ಲಿನಲ್ಲಿ, ಕಡ್ಡಿಗಳಲ್ಲಿ..ಎಲ್ಲೆಂದರಲ್ಲಿ ಆ ಮಹಾಶಕ್ತಿಯನ್ನು ಕಾಣುವ ಭಾರತೀಯರಿಗೆ; ಶಿವ, ರುದ್ರ, ಈಶಾನ, ಪರಮೇಶ್ವರ, ಮಹಾದೇವ, ತ್ರ್ಯಂಬಕ, ಮೃತ್ಯುಂಜಯ, ನೀಲಕಂಠನ ಸ್ವರೂಪವನ್ನು ದರ್ಶಿಸುವುದು ಕಷ್ಟವೇ?
ಶಿವನನ್ನು ಅರಿಯಲು ಹೊರಟವರು ಈ ಬ್ರಹ್ಮಾಂಡವನ್ನು ಅರಿ ಯುತ್ತಾರೆ, ತಮ್ಮನ್ನು ತಾವೇ ಅರಿಯುತ್ತಾರೆ. ಆತ್ಮ ಜ್ಞಾನಿಗಳಾಗುತ್ತಾರೆ, ಬ್ರಹ್ಮಜ್ಞಾನಿಗಳಾಗುತ್ತಾರೆ, ಮುಮುಕ್ಷುಗಳು, ಸರ್ವಜ್ಞರು ಎನಿಸಿಕೊಂಡು ಸ್ವಯಂ ಶಿವನೇ ಆಗುತ್ತಾರೆ. ಶಿವನನ್ನು ಅರಿ ಯುವುದೆಂದರೆ ನಮ್ಮನ್ನು ನಾವು ಅರಿಯು ವುದು. ಶಿವನಂತಹ ಮಹಾಸರಳನನ್ನು, ಶಕ್ತಿ ಯನ್ನು ಅರಿಯಲು ಸಾಧ್ಯವಾದವರಿಗೆ, ಜಗತ್ತಿನಲ್ಲಿ ಮತ್ತೇನು ತಿಳಿಯಲು ಬಾಕಿಯಿರುತ್ತದೆ?
ಭಾರತೀಯ ಪುರಾಣಗಳಲ್ಲಿ ವರ್ಣಿಸಲ್ಪಟ್ಟಿರುವ ಶಿವನ ರೂಪವೊಂದು ರೀತಿಯಿದ್ದರೆ, ಅವನನ್ನು ವರ್ಣಿಸಿರುವ ವೇದಮಂತ್ರಗಳು ಭಿನ್ನ ಇವೆ. ಶಿವ ಬೇರೆ, ರುದ್ರ ಬೇರೆ, ರುದ್ರರು ಬೇರೆ.. ಇವೆಲ್ಲ ಚರ್ಚೆಗಳು ವಿದ್ವಾಂಸರಿಗಿರಲಿ. ಒಳಗಣ್ಣಿನಲ್ಲಿ ಆ ಮಹಾಮಹಿಮನನ್ನು ಕಂಡರೆ ವೇದ, ಪುರಾಣಗಳಲ್ಲಿ ಹೇಗೆಲ್ಲ ವರ್ಣಿಸಿದ್ದಾರೋ ಅವೆಲ್ಲವೂ ಈ ಮಹಾಶಕ್ತಿಯೇ ಹೌದು ಎಂದು ವೇದ್ಯವಾಗುತ್ತದೆ. ಬುದ್ಧಿಗೆ ಬರುವ ಅನುಮಾನ ಗಳನ್ನು ಅಂತರಂಗ ಇಲ್ಲ ಮಾಡುತ್ತದೆ. ಅಲ್ಲಿ ಭಿನ್ನ ವರ್ಣನೆ ಗಳಿಗಿಂತ ಶಿವನ ಏಕಾತ್ಮತಾವಾದವೇ ಇರುತ್ತದೆ.
ರುದ್ರ ಎಂಬ ಶಬ್ದಕ್ಕೆ ಹಲವರು, ಹಲವು ರೀತಿಯಲ್ಲಿ ಅರ್ಥ ಮಾಡಿದ್ದಾರೆ. ಆವೇಶದಿಂದ ಚಲಿಸುವ ಶಕ್ತಿಯೇ ರುದ್ರ ಎಂದು ಮಹರ್ಷಿ ಅರವಿಂದರ ಶಿಷ್ಯವರ್ಗ ಹೇಳುತ್ತದೆ. ರೋದಯತಿ, ದ್ರಾವಯತಿ ಇತಿ ರುದ್ರಃ ಎಂದು ವ್ಯಾಖ್ಯಾನಗಳು ಹೇಳುತ್ತವೆ. ಯಾರು ಕಣ್ಣೀರು ಬರಿಸುತ್ತಾನೋ, ಕರಗಿಸುತ್ತಾನೋ ಅವನೇ ರುದ್ರ: ಇದು ಮೇಲಿನ ವ್ಯಾಖ್ಯಾನದ ಅರ್ಥ. ಕಣ್ಣೀರು ಆನಂದಕ್ಕೂ ಬರುತ್ತದೆ, ದುಃಖಕ್ಕೂ ಬರುತ್ತದೆ. ಶಿವನ ವಶವರ್ತಿ ಗಳಾದಾಗ, ಅವನ ಪ್ರೀತಿಯನ್ನು ಅನುಭವಿಸಿದಾಗ, ಅದರಿಂದ ಹುಟ್ಟುವ ಅಗಾಧ ಆನಂದ, ಶಾಂತಿಯಲ್ಲಿ ಮುಳುಗಿದಾಗ ಹೊಮ್ಮುವ ಭಾವವಿದೆಯಲ್ಲ ಅದೇ ರುದ್ರಭಾವ. ಆಗ ಹುಟ್ಟಿದ ಮಂತ್ರದ ಹೆಸರೇ ರುದ್ರ! ಅದನ್ನು ಹೇಳಿಕೊಂಡು ಕಣ್ಣೀರಿ ನಿಂದಲೇ ಶಿವನಿಗೆ ಅಭಿಷೇಕ ಮಾಡುವುದೇ ರುದ್ರಾಭಿಷೇಕ. ಮಹಾಶಾಂತಿಯ ಅನುಭವವಾದಾಗ ನಮ್ಮರಿವಿಗೆ ಬರದಂತೆ ತೊಟ್ಟಿಕ್ಕುವ ಹನಿಗಳಿಗೆ ಬರೀ ಕಣ್ಣೀರು ಎನ್ನಲಾದೀತೇ? ಅಂತರಂಗ ಕರಗಿ ಆನಂದವೇ ತುಂಬಿ ಹರಿಯುವಾಗ ಅದನ್ನು ಅಶ್ರುಬಿಂದುಗಳೆಂದು ಸುಮ್ಮನೆ ವರ್ಣೀಸಲಾದೀತೇ? ಶಿವನ ಅನುಗ್ರಹದಿಂದ ಒಳಗೆ ಸಾವಿರಾರು ವರ್ಷಗಳಿಂದ ಕಟ್ಟಿಕೊಂಡಿರುವ ಅಜ್ಞಾನ ಕರಗಿ, ಬದುಕು ಜ್ಞಾನವಾಗಿ ಹರಿಯುವಾಗ ಅದನ್ನು ಬ್ರಹ್ಮಭಾವ ಎನ್ನುತ್ತಾರೆ. ಅಳಿಸುವವನು, ಕರಗಿಸುವವನು ಎಂದರೆ ಇದೇ!
ಶಿವನ ರೂಪವನ್ನು ನೋಡಿ.. ತಲೆಯಲ್ಲಿ ಗಂಟು ಕಟ್ಟಿಕೊಂಡಿರುವ ಜಟೆ. ಅದರೊಳಗೆ ಹುದುಗಿಕೊಂಡಿರುವವಳು ದೇವಮಾತೆ ಗಂಗೆ. ಅವಳು ಸದಾ ಧುಮ್ಮಿಕ್ಕಿ, ಭೋರ್ಗರೆದು ಹರಿಯಲು ಸಿದ್ಧವಾಗಿಯೇ ಇರುತ್ತಾಳೆ. ಅಲ್ಲೇ ಅರ್ಧಚಂದ್ರ ನಸುನಗುತ್ತಾ ಇರುತ್ತಾನೆ. ಅದಕ್ಕೇ ಆತ ಚಂದ್ರಮೌಳಿ, ಚಂದ್ರಶೇಖರ (ಶಿಖೆಯಲ್ಲಿ ಚಂದ್ರನನ್ನು ಧರಿಸಿದವನು). ಹಣೆಯಲ್ಲೊಂದು ಕಣ್ಣು, ಅದಕ್ಕೇ ಆತ ತ್ರ್ಯಂಬಕ ಅಥವಾ ತ್ರಿನೇತ್ರ. ಜತೆಗೆ ಮೈತುಂಬಾ ಭಸ್ಮ. ಕಂಠದಲ್ಲಿ ಸರ್ಪ, ಅದಕ್ಕೆ ಆತ ಸರ್ಪಭೂಷಣ. ಬಲಗೈನಲ್ಲಿ ತ್ರಿಶೂಲ, ಡಮರು, ಎಡಗಡೆ ಪತ್ನಿ ಪಾರ್ವತೀ. ನಂದಿ ಅಂದರೆ ಒಂದು ಎತ್ತು ಅವನಿಗೆ ವಾಹನ. ಸೊಂಟಕ್ಕೆ ಜಿಂಕೆ ಚರ್ಮ, ಮೈಯೆಲ್ಲ ನೀಲಿ, ನೀಲಿ. ಇದು ಬರೀ ರೂಪವೇ, ಅರ್ಥವೇ, ಆತ್ಮಾರ್ಥವೇ? ತಲೆಯ ಮೇಲಿರುವ ಗಂಗೆಯು, ನೆತ್ತಿಯ ಸಹಸ್ರಾರ ಕೇಂದ್ರದಿಂದ ಹೊರ ಹೊಮ್ಮುವ ಅಮೃತದ ಸಂಕೇತ. ಅಂದರೆ ಶಿವ ಸಾವಿನಿಂದ ಪಾರುಮಾಡಿ, ನಮ್ಮನ್ನು ಅಮೃತಾತ್ಮರನ್ನಾಗಿ ಮಾಡುತ್ತಾನೆ. ಅರ್ಧಚಂದ್ರನು, ಆನಂದದ ಸಂಕೇತ, ಹಣೆಯ ಮೇಲೆ ತೆರೆದಿರುವ ಕಣ್ಣು, ಜ್ಞಾನ ಪರಿಪೂರ್ಣ ಅವಸ್ಥೆಗೆ ಮುಟ್ಟಿದೆ ಎನ್ನುವುದನ್ನು ಸೂಚಿ ಸುತ್ತದೆ. ಕತ್ತಿನಲ್ಲಿರುವ ಹೆಡೆ ಬಿಚ್ಚಿಕೊಂಡಿರುವ ಸರ್ಪವು, ನಾಡಿಗಳೆಲ್ಲ ಪರಿಶುದ್ಧವಾಗಿ, ಕುಂಡಲಿನಿಯಲ್ಲಿ (ಕುಂಡಲ ಎಂದರೆ ಹಾವು) ಸರಾಗವಾಗಿ ಶಕ್ತಿ ಸಂಚಾರವಾಗಿ, ನೆತ್ತಿಯಲ್ಲಿರುವ ಸಹಸ್ರಾರ ಕೇಂದ್ರ ಅರಳಿಕೊಂಡಿದೆ ಎನ್ನುವುದನ್ನು ಸೂಚಿಸುತ್ತದೆ.
ಮೈತುಂಬಾ ಹಚ್ಚಿಕೊಂಡಿರುವ ಭಸ್ಮ, ತ್ಯಾಗ-ವೈರಾಗ್ಯವನ್ನು ಸೂಚಿಸುತ್ತದೆ. ಮೂರು ಮೊನೆಗಳಿರುವ ತ್ರಿಶೂಲ, ಸತ್ವ- ರಜ-ತಾಮಸಗಳನ್ನು ಗೆದ್ದು, ಅವುಗಳನ್ನು ಏಕತ್ರಗೊ ಳಿಸಿ, ಹಿಡಿತದಲ್ಲಿಟ್ಟುಕೊಂಡಿರುವುದರ ಬಿಂಬ. ಡಮರುವಿನಿಂದ ಹೊಮ್ಮುವ ನಾದವು ಸೃಷ್ಟಿಯಲ್ಲಿ ನಿರಂತರವಾಗಿ ಕೇಳಿಬರುವ ಓಂಕಾರವನ್ನು ಧ್ವನಿಸುತ್ತದೆ. ಮೈನ ನೀಲಿಯು, ಮಹಾ ಯೋಗಿಯಲ್ಲಿ ಸಹಜವಾಗಿ ಕಂಡುಬರುವ ನೀಲ ಪ್ರಭೆಯನ್ನು ಸಂಕೇತಿಸುತ್ತದೆ. ಸೊಂಟಕ್ಕೆ ಕಟ್ಟಿಕೊಂಡಿರುವ ಜಿಂಕೆ ಚರ್ಮವು ತೀವ್ರ ತಪವನ್ನು, ವಸ್ತ್ರದ ಮೇಲಿನ ವೈರಾಗ್ಯವನ್ನು ತೋರಿಸುತ್ತದೆ. ಪತ್ನಿ ಪಾರ್ವತೀಯು ಪ್ರಕೃತಿ ಅಂದರೆ ಸೃಷ್ಟಿಯನ್ನು ನಡೆ ಸಲು ನೆರವಾಗುವ ಸ್ತ್ರೀತ್ವ, ಮಾತೃತ್ವದ ಮಹಾಮೂರ್ತಿ.
ಅಂತಿಮವಾಗಿ ನಂದಿ ಅಂದರೆ ಒಂದು ಎತ್ತು ಅವನ ವಾಹನ! ಇದರ ಅರ್ಥವಿಷ್ಟೇ..ಮುನ್ನುಗ್ಗು, ನಿಲ್ಲದಿರು, ನಿಂತ ನೀರಾಗದಿರು, ಸಂಚರಿಸುತ್ತಿರು, ಸಾಗುತ್ತಿರು..ಎಂದಾದರೊಂದು ದಿನ ಗುರಿ ಮಟ್ಟುತ್ತೀಯ.. ಶಿವನೆಂದರೆ ಬರೀ ಮಹಾದೇವನಲ್ಲ ಮಹಾ ಭಾವ. ಶಿವರಾತ್ರಿ ಯೆಂದರೆ ಕೇವಲ ರಾತ್ರಿಯಲ್ಲ, ಕತ್ತಲನ್ನು ಕಳೆದು ಕೊಂಡು ಬೆಳಕಿಗೆ ಒಡ್ಡಿಕೊಳ್ಳುವ ಮಹಾಸ್ಫೂರ್ತಿ. ಅವನ ಆರಾಧನೆ ಯೆಂದರೆ ಕೇವಲ ಪೂಜೆಯಲ್ಲ, ಮಹೋತ್ಸವ.
-ನಿರೂಪ