Advertisement

ಮಹಾಶಿವರಾತ್ರಿ-ನಿಶ್ಚಲ ರಾತ್ರಿ

05:15 AM Feb 13, 2018 | Harsha Rao |

ಭಾರತೀಯ ಸಂಸ್ಕೃತಿಯಲ್ಲಿ ಒಂದು ಕಾಲದಲ್ಲಿ ವರ್ಷವಿಡೀ ಅಂದರೆ 365 ದಿನಗಳೂ ಹಬ್ಬಗಳನ್ನು ಆಚರಿಸಲಾಗುತ್ತಿತ್ತು. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಮ್ಮ ಪೂರ್ವಜರಿಗೆ ಹಬ್ಬವನ್ನು ಆಚರಿಸಲು ಒಂದು ಕಾರಣ ಬೇಕಿತ್ತಷ್ಟೆ. ಈ 365 ಹಬ್ಬಗಳ ಹಿಂದೆಯೂ ಬೇರೆಬೇರೆ ಕಾರಣಗಳಿದ್ದವು; ಹಾಗೆಯೇ ಬದುಕಿನ ಬೇರೆಬೇರೆ ಉದ್ದೇಶಗಳಿದ್ದವು. ಅಂದರೆ, ಆ ಕಾಲದ ನಮ್ಮ ಹಿರಿಯರು ಐತಿಹಾಸಿಕ ಘಟನೆಗಳನ್ನು, ವಿಜಯೋತ್ಸವಗಳನ್ನು/ಅನುದಿನದ ಸುಗ್ಗಿ, ಬಿತ್ತನೆ, ಕೊಯ್ಲು ಹೀಗೆ ಅನೇಕ ಸಂಗತಿಗಳನ್ನು ಸಂಭ್ರಮದಿಂದ ಆಚರಿ ಸುತ್ತಿದ್ದರು. ಒಟ್ಟಿನಲ್ಲಿ, ನಿತ್ಯಜೀವನದ ಪ್ರತಿಯೊಂದು ಸಂದರ್ಭಕ್ಕೂ ಆಗ ಹಬ್ಬಗಳಿದ್ದವು. ಆದರೆ, ಇವೆಲ್ಲ ಹಬ್ಬಗಳ ಪೈಕಿ ಮಹಾಶಿವರಾತ್ರಿಗೆ ಇರುವ ಮಹತ್ವವೇ ವಿಶೇಷ. ಚಾಂದ್ರಮಾನ ಪಂಚಾಂಗದಲ್ಲಿ ಬರುವ ಪ್ರತೀ ತಿಂಗಳ ಹದಿನಾಲ್ಕನೇ ದಿನ, ಅಂದರೆ ಅಮಾವಾಸ್ಯೆಯ ಹಿಂದಿನ ದಿನ ಶಿವರಾತ್ರಿ ಎನಿಸಿಕೊಳ್ಳುತ್ತದೆ. ಹಾಗಾಗಿ ಒಂದು ವರ್ಷದಲ್ಲಿ ಹನ್ನೆರಡು ಶಿವರಾತ್ರಿಗಳು ಸಂಭವಿಸುತ್ತವೆ. ಇವುಗಳ ಪೈಕಿ, ಫೆಬ್ರವರಿ-ಮಾರ್ಚ್‌ ತಿಂಗಳ ಮಧ್ಯೆ ಸಂಭವಿಸುವ ಮಹಾಶಿವರಾತ್ರಿಯು ಆಧ್ಯಾತ್ಮಿಕ ಮಹತ್ವವುಳ್ಳದ್ದಾಗಿದೆ. ಈ ಮಹಾ ಶಿವರಾತ್ರಿಯಂದು ಭೂಮಂಡಲದ ಉತ್ತರಾರ್ಧ ಯಾವ ಸ್ಥಾನದಲ್ಲಿ ಇರುತ್ತದೆಂದರೆ, ಈ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರಾಕೃತಿಕವಾಗಿಯೇ ಶಕ್ತಿಯ ಹರಿವು ಮೇಲ್ಮುಖವಾಗಿರುತ್ತದೆ. ಅಂದರೆ, ಪ್ರಕೃತಿಯೇ ಪ್ರತಿಯೊಬ್ಬರನ್ನೂ ಆಧ್ಯಾತ್ಮಿಕ ಔನ್ನತ್ಯದತ್ತ ತಳ್ಳುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬ ಆಶಯದಿಂದ, ಈ ಸಂಪ್ರದಾಯಕ್ಕೆ ಅನುಗುಣವಾಗಿ ನಾವು ರಾತ್ರಿಯಿಡೀ ಸಂಭ್ರಮಾಚರಣೆಗಳನ್ನು ಹಮ್ಮಿಕೊಳ್ಳುತ್ತೇವೆ. ನಮ್ಮೊಳಗಿರುವ ಈ ಪ್ರಕೃತಿದತ್ತವಾದ ಶಕ್ತಿಯು ತನ್ನ ಮೇಲ್ಮುಖವಾದ ಹರಿವನ್ನು ಕಂಡುಕೊಳ್ಳಬೇಕು. ಇದು ನಿಮ್ಮ ಅನುಭವಕ್ಕೆ ಬರಬೇಕೆಂದರೆ, ನೀವು ನಿಮ್ಮ ಬೆನ್ನುಹುರಿಯನ್ನು ನೆಟ್ಟಗಿಟ್ಟುಕೊಂಡು, ರಾತ್ರಿಯಿಡೀ ಎಚ್ಚರದಿಂದಿರಬೇಕಷ್ಟೆ. ಆಧ್ಯಾತ್ಮಿಕ ಪಥದಲ್ಲಿರುವವರಿಗೆ ಮಹಾಶಿವರಾತ್ರಿಯು ಅತ್ಯಂತ ಮಹತ್ವದ್ದಾಗಿದೆ. ಹಾಗೆಯೇ, ಸಂಸಾರಿಗಳಿಗೆ ಮತ್ತು ಲೌಕಿಕ ಜಗತ್ತಿನಲ್ಲಿ ಮಹತ್ವಾಕಾಂಕ್ಷೆ ಹೊಂದಿರುವವರಿಗೂ ಇದು ಬಹಳ ಮುಖ್ಯವೇ ಆಗಿದೆ. ಸಂಸಾರಿಗಳು ಮಹಾ ಶಿವರಾತ್ರಿಯನ್ನು ಶಿವನ ವಿವಾಹ ವಾರ್ಷಿಕೋತ್ಸವವಾಗಿ ಆಚರಿಸಿದರೆ, ಮಹತ್ವಾಕಾಂಕ್ಷಿಗಳು ಈ ಹಬ್ಬವನ್ನು “ಶಿವನು ತನ್ನೆಲ್ಲ ಶತ್ರುಗಳನ್ನು ಜಯಿಸಿದ ದಿನ’ವನ್ನಾಗಿ ಆಚರಿಸುತ್ತಾರೆ. 

Advertisement

ಆದರೆ, ಯೋಗಿಗಳು ಈ ದಿನವನ್ನು “ಶಿವನು ಕೈಲಾಸದೊಂದಿಗೆ ಒಂದಾದ ದಿನ’ವೆಂದು ಪರಿಭಾವಿಸುತ್ತಾರೆ. ಅಂದರೆ, ಶಿವನು ಈ ದಿನದಂದು ಪರ್ವತದಂತೆ ನಿಶ್ಚಲನಾದ! ನಮ್ಮ ಯೋಗ ಪರಂಪರೆಯಲ್ಲಿ ಶಿವನನ್ನು ದೇವರೆಂದು ಪೂಜಿಸುವುದಿಲ್ಲ. ಬದಲಿಗೆ, ಅವನನ್ನು “ಆದಿಗುರು’ವೆಂದು ಭಾವಿಸಲಾಗಿದೆ. “ಈ ಜಗತ್ತಿನಲ್ಲಿ ಮೊದಲಿಗೆ ಯೋಗ ಜಾnನವು ಸೃಷ್ಟಿಯಾಗಿದ್ದೇ ಶಿವನಿಂದ’ ಎಂಬ ಗ್ರಹಿಕೆ ಇದರ ಹಿಂದಿದೆ. ಸಾವಿರಾರು ವರ್ಷಗಳ ಕಾಲ ಧ್ಯಾನದಲ್ಲಿ ಮುಳುಗಿದ್ದ ಶಿವ, ಕೊನೆಗೊಂದು ದಿನ ನಿಶ್ಚಲನಾದ. ಅವನು ಹೀಗೆ ನಿಶ್ಚಲನಾದ ದಿನವೇ ಮಹಾ ಶಿವರಾತ್ರಿ! ಈ ದಿನದಂದು ಆತನೊಳಗಿನ ಎಲ್ಲ ಚಲನೆಗಳು ನಿಂತುಹೋಗಿ, ಅವನು ಸಂಪೂರ್ಣವಾಗಿ ನಿಶ್ಚಲನಾದ. ಹೀಗಾಗಿ, ಯೋಗಿಗಳು ಮಹಾಶಿವರಾತ್ರಿಯನ್ನು “ನಿಶ್ಚಲ ರಾತ್ರಿ’ ಎಂದು ಪರಿಭಾವಿಸುತ್ತಾರೆ. 

ಈ ದಂತಕತೆಗಳು ಏನೇ ಇರಲಿ, ಯೋಗ ಪರಂಪರೆಯಲ್ಲಿ ಮಹಾಶಿವರಾತ್ರಿಯ ಬೆಳಗ್ಗೆ ಮತ್ತು ರಾತ್ರಿಗೆ ಇಷ್ಟೊಂದು ಪ್ರಾಮುಖ್ಯವಿರುವುದಕ್ಕೆ, ಅದು ಆಧ್ಯಾತ್ಮಿಕ ಮಾರ್ಗದಲ್ಲಿ ಇರುವವರಿಗೆ ಒದಗಿಸುವ ಸಾಧ್ಯತೆಯೇ ಮೂಲಕಾರಣ. ಹಲವು ಘಟ್ಟಗಳನ್ನು ದಾಟಿ ಬಂದಿರುವ ಆಧುನಿಕ ವಿಜಾnನವು, ನಮ್ಮ ಜೀವ, ವಸ್ತುಗಳು ಮತ್ತು ಅದರ ಅಸ್ತಿತ್ವ, ಬ್ರಹ್ಮಾಂಡ ಮತ್ತು ತಾರಾಪುಂಜ- ಹೀಗೆ ಸಮಸ್ತವೂ ಒಂದೇ ಅಪ್ರತಿಮ ಶಕ್ತಿಯ ಬೇರೆಬೇರೆ ರೂಪಗಳು ಎನ್ನುವುದನ್ನು ನಮಗೆ ನಿರೂಪಿಸಲು ಹೊರಟಿದೆ.

ಈ ವೈಜಾnನಿಕ ಸತ್ಯವು ಪ್ರತಿಯೊಬ್ಬ ಯೋಗಿಯ ಅನುಭವಕ್ಕೆ ದಕ್ಕುವ ನೈಜ ಸಂಗತಿಯಾಗಿದೆ. “ಯೋಗಿ’ ಎಂದರೆ, ಈ ಅಸ್ತಿತ್ವದ ಅಖಂಡತೆಯನ್ನು ಅರಿತವನು ಎಂದರ್ಥ. ನಾನು “ಯೋಗ’ ಎಂದು ಹೇಳಿದಾಗ, ಯಾವೊಂದು ನಿರ್ದಿಷ್ಟ ಪದ್ಧತಿಯ 
ಬಗ್ಗೆ ಮಾತನಾಡುತ್ತಿಲ್ಲ. ಅಸೀಮವಾದದ್ದನ್ನು ತಿಳಿದು ಕೊಳ್ಳುವ, ಈ ಅಸ್ತಿತ್ವದ ಅಖಂಡತೆಯನ್ನು ಅರಿಯುವ ಎಲ್ಲ ಬಯಕೆಗಳು ಯೋಗವೇ. 

ಈ ಅಸೀಮವಾದ ಅಖಂಡತೆಯನ್ನು ಅನುಭವಿಸುವ ಸಾಧ್ಯತೆಯನ್ನು ಮಹಾಶಿವರಾತ್ರಿಯು ನಮ್ಮ ಮುಂದೆ ತೆರೆದಿಡುತ್ತದೆ.

Advertisement

– ಸದ್ಗುರು ಈಶ ಫೌಂಡೇಶನ್‌

Advertisement

Udayavani is now on Telegram. Click here to join our channel and stay updated with the latest news.

Next