ಉಡುಪಿ: ಮಹಾಶಿವರಾತ್ರಿ ಆಚರಣೆ ಪ್ರಯುಕ್ತ ಗುರುವಾರ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.
ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ಶಿವರಾತ್ರಿ ಆಚರಣೆ ನಡೆಯುತ್ತದೆ. ಈ ದಿನ ರಾತ್ರಿ ಸಮಯದಲ್ಲಿ ಶಿವ ಪಾರ್ವತಿಯ ಜತೆಯಲ್ಲಿ ಭೂಮಿಗೆ ಬರುತ್ತಾನೆ. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಆ ಸಮಯದಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗು ತ್ತವೆ ಎಂದು ಶಾಸ್ತ್ರೋಕ್ತಿ ಇದೆ. ಈ ನಂಬಿಕೆಯಂತೆ ಶಿವರಾತ್ರಿಯಂದು ಜಾಗರಣೆ, ಆಚರಣೆ, ಅಭಿಷೇಕ, ಭಜನೆ, ಪಾದಯಾತ್ರೆ, ದೇವರ ದರ್ಶನ ನಡೆಸಲಾಗುತ್ತದೆ.
ಭಕ್ತರು ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ ದೇವಸ್ಥಾನಗಳ ಆಡಳಿತ ಮಂಡಳಿಗಳು ಇದಕ್ಕೆ ಬೇಕಾದ ಸಿದ್ಧತೆ ನಡೆಸಿವೆ. ಬಿಲ್ವಪತ್ರೆ ಪ್ರಿಯನಾದ ಕಾರಣ ಬಿಲ್ವಾರ್ಚನೆ, ಅಭಿಷೇಕ ಪ್ರಿಯನಾದ ಕಾರಣ ಶತರುದ್ರಾಭಿಷೇಕಗಳು, ರುದ್ರ, ಚಮಕ ಪಾರಾಯಣಗಳು ನಡೆಯಲಿವೆ. ಕೆಲವು ದೇವಸ್ಥಾನಗಳಲ್ಲಿ ವಾರ್ಷಿಕ ರಥೋತ್ಸವವೂ ಇದೇ ಸಮಯದಲ್ಲಿ ನಡೆಯಲಿದ್ದು ಮರುದಿನ ಭೋಜನ ಪ್ರಸಾದವನ್ನು ಏರ್ಪಡಿಸಲಾಗಿದೆ. ಕೆಲವು ದೇವಸ್ಥಾನಗಳಲ್ಲಿ ಭಜನ ಮಂಡಳಿಗಳು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ 24 ಗಂಟೆಗಳ ಭಜನ ಕಾರ್ಯಕ್ರಮ ನಡೆಸಲಿವೆ. ಇದು ಜಾಗರಣೆ ನಡೆಸಲು ಅನುಕೂಲವಾಗಲಿದೆ. ಭಕ್ತರು ಮನೆಮನೆಗಳಲ್ಲಿಯೂ ಉಪವಾಸವಿದ್ದು ವಿಶೇಷ ಪೂಜೆಗಳನ್ನು ನಡೆಸುತ್ತಾರೆ ಮತ್ತು
ಮನೆಗಳಲ್ಲಿಯೂ ರುದ್ರ ಪಾರಾಯಣ ಗಳನ್ನು ನಡೆಸುತ್ತಾರೆ.
ದೊಡ್ಡ ಮಟ್ಟದ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳದೇ ಅದ್ದೂರಿ ಕಡೆಗೆ ಮನ ಮಾಡದೇ, ಭಜನೆಯಂತಹ ಧಾರ್ಮಿಕ ಚಟುವಟಿಕೆಗೆ ಹೆಚ್ಚಿನ ಆದ್ಯತೆ ದೊರೆತದ್ದು ಈ ಬಾರಿಯ ವಿಶೇಷ.
ದೇವಾಲಯಗಳಲ್ಲಿ ದೀಪಾಲಂಕಾರ ನಡೆದಿದೆ. ಬೆಳಗ್ಗೆಯಿಂದಲೇ ಭಜನೆ, ಅಭಿಷೇಕ, ಅರ್ಚನೆ ನಡೆಯಲಿದೆ. ಗ್ರಾಮೀಣ ಭಾಗಗಳಲ್ಲಿ ಕೆಲವು ಸಮುದಾಯದವರು “ಹಣಬು’ ಸುಡುವ ಪದ್ಧತಿಯನ್ನು ನಡೆಸುತ್ತಾರೆ. ಹತ್ತಿ, ಬಟ್ಟೆ, ಹುಲ್ಲುಗಳಿಂದ ಮಾಡಿದ ಆಕಾರವನ್ನು ಸುಡುತ್ತಾರೆ. ರಾತ್ರಿ ಇಡೀ ಜಾಗರಣೆಗೆ ಸಿದ್ಧತೆಗಳೂ ನಡೆದಿವೆ.