ಹೊಸದಿಲ್ಲಿ/ಮುಂಬಯಿ: ಕೊರೊನಾದಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಮಾ.28ರಿಂದ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಜಿಲ್ಲಾಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಸಿಎಂ ಉದ್ಧವ್ ಠಾಕ್ರೆ ಈ ನಿರ್ಧಾರ ಪ್ರಕಟಿಸಿದ್ದಾರೆ. ಶಾಂಪಿಂಗ್ ಮಾಲ್, ಇನ್ನಿತರ ವಾಣಿಜ್ಯ ಚಟುವಟಿಕೆಗಳನ್ನು ರಾತ್ರಿ 8ಕ್ಕೆ ಮುಚ್ಚುವಂತೆ ಆದೇಶಿಸಲಾಗಿದೆ.
ಹೀಗಾಗಿ ಲಾಕ್‌ಡೌನ್ ಭೀತಿ ಯಿಂದ ರಾಜ್ಯ ಸದ್ಯಕ್ಕೆ ಪಾರಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಜಿಲ್ಲೆಗಳಲ್ಲಿ ಕಠಿನ ನಿಯಮ ಜಾರಿಗೆ ತರುವಂತೆ ಆದೇಶಿಸಿದ್ದಾರೆ. ಮಾ.28, 29ರಂದು ಹೋಳಿ ಹಬ್ಬ ಆಚರಣೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಸುವುದನ್ನು ಮತ್ತಷ್ಟು ಚುರುಕು ಗೊಳಿಸ ಲಾಗುತ್ತದೆ ಎಂದಿದ್ದಾರೆ. ಮಹಾರಾಷ್ಟ್ರ ದಲ್ಲಿ ಒಂದೇ ದಿನ 36,902 ಪ್ರಕರಣಗಳು ದಾಖಲಾಗಿದ್ದು, 112 ಸಾವುಗಳು ಸಂಭವಿಸಿವೆ.
16ನೇ ದಿನವೂ ಏರಿಕೆ: ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 59,118 ಹೊಸ ಪ್ರಕ ರಣ, 257 ಮಂದಿ ಅಸುನೀಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,21,066ಕ್ಕೆ ಏರಿಕೆ ಯಾ ಗಿದೆ. ಚೇತರಿಕೆ ಪ್ರಮಾಣ ಶೇ.95.05ಕ್ಕೆ ಕುಸಿದಿದೆ.
ವಿಸ್ತರಣೆ: ಕೊರೊನಾ ಲಸಿಕೆಯನ್ನು ಮತ್ತಷ್ಟು ವಯೋಮಾನದವರಿಗೆ ನೀಡಲು ಕೇಂದ್ರ ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ತಿಳಿಸಿದ್ದಾರೆ. ಎ.1ರಿಂದ ಅನ್ವಯವಾಗುವಂತೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ದೇಶದಲ್ಲಿಯೇ ಸಿದ್ಧ ಪಡಿಸಿದ ಲಸಿಕೆ ಬಳಕೆ ಮಾಡಲು ಉತ್ಸಾಹ ತೋರಿ ಸುತ್ತಿದ್ದಾರೆ. “ನಾವು ಉತ್ಪಾದಿಸಿದ ಲಸಿಕೆಗಳು ಸುರಕ್ಷಿತ ವಾಗಿಯೇ ಇವೆ’ ಎಂದರು.
ಮತ್ತೆ ಪತ್ರ: ಹೋಳಿ ಈಸ್ಟರ್ ಮತ್ತು ಈದ್ ಹಬ್ಬಗಳ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗದಂತೆ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ದೇಶದಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯವಾಗಿ ಪ್ರತಿಬಂಧಕ ಕ್ರಮಗಳನ್ನು ಹಾಕಲು ಅವಕಾಶ ಇದೆ ಎಂದು ಹೇಳಿದ್ದಾರೆ. ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಪತ್ರದಲ್ಲಿ ಪ್ರಸ್ತಾವಿಸಿದ್ದಾರೆ.