Advertisement

ಬೀದರ ಜಿಲ್ಲೆಗೆ “ಮಹಾ’ಗಂಡಾಂತರ

07:28 AM Jun 09, 2020 | Suhan S |

ಬೀದರ: ಮಹಾರಾಷ್ಟ್ರದ ನಂಟಿನಿಂದ ಬೀದರನಲ್ಲಿ ಆರ್ಭಟಿಸುತ್ತಿರುವ ಕೋವಿಡ್ ಸೋಂಕಿನಿಂದಾಗಿ ಮುಂಬರುವ ದಿನಗಳಲ್ಲಿ ಗಂಡಾಂತರ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಅತಿ ಹೆಚ್ಚು 48 ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ತ್ರಿಶತಕದತ್ತ ದಾಪುಗಾಲು ಹಾಕುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ.

Advertisement

ಸೋಮವಾರ ಪತ್ತೆಯಾಗಿರುವ ಹೊಸ ಪ್ರಕರಣಗಳಲ್ಲಿ ಒಂದು ಕೇಸ್‌ (ಪಿ-2968)ರ ಸಂಪರ್ಕ ಹೊರತುಪಡಿಸಿದರೆ ಉಳಿದ 47 ಸೋಂಕಿತರೆಲ್ಲರೂ ಮಹಾರಾಷ್ಟ್ರದ ಸಂಪರ್ಕವನ್ನೇ ಹೊಂದಿದ್ದಾರೆ. ದಿನ ಕಳೆದಂತೆ “ಮಹಾ’ ನಂಟಿನಿಂದ ಜಿಲ್ಲೆಗೆ ಹಾನಿ ಹೆಚ್ಚಾಗುತ್ತಿದೆ. ಮುಖ್ಯವಾಗಿ ಹಳ್ಳಿ ಹಳ್ಳಿಗಳಿಗೆ ಸೋಂಕು ವ್ಯಾಪಿಸುತ್ತಿರುವುದು ಆತಂಕವನ್ನುಂಟು ಮಾಡಿದೆ. ಮುಂಬಯಿ, ಪುಣೆಯಿಂದ ವಾಪಸ್‌ ಬಂದು ಕ್ವಾರಂಟೈನ್‌ನಲ್ಲಿರುವ ವಲಸೆ ಕಾರ್ಮಿಕರಲ್ಲಿ ಪಾಸಿಟಿವ್‌ ಪತ್ತೆಯಾಗುತ್ತಿವೆ. ಇದಲ್ಲದೇ ಕೆಲವರದ್ದು ಕ್ವಾರಂಟೈನ್‌ ಅವಧಿ ಮುಗಿಸಿ ಮನೆಗೆ ವಾಪಸಾದ ಬಳಿಕ ಟೆಸ್ಟಿಂಗ್‌ ವರದಿ ಬರುತ್ತಿರುವುದು ಸೋಂಕು ವ್ಯಾಪಿಸುವ ಆತಂಕ ಹೆಚ್ಚುತ್ತಿದೆ.

ಜಿಲ್ಲೆಯ ಬಸವಕಲ್ಯಾಣ ತಾಲೂಕಿಗೆ ಹೆಚ್ಚು ಕೋವಿಡ್ ವೈರಾಣು ಬಾಧಿಸಿದ್ದು, ತಾಲೂಕಿನ ದೇವಿ ತಾಂಡಾ ಒಂದರಲ್ಲೇ 17 ಪಾಸಿಟಿವ್‌ ಪತ್ತೆಯಾಗಿರುವುದು ಆ ಪ್ರದೇಶದಲ್ಲಿ ಭೀತಿ ಆವರಿಸುವಂತೆ ಮಾಡಿದೆ. ಬಸವಕಲ್ಯಾಣ ತಾಲೂಕಿನ ದೇವಿ ತಾಂಡಾ 17, ಹಿಪ್ಪಳಗಾಂವ 4, ತಮಗ್ಯಾಳ 2, ಜಾನಾಪುರ, ಹಿರಣಗಾಂವ್‌, ಓತಗಿ, ಲಾಡವಂತಿ, ಶಿರುರಿ ಮತ್ತು ಕೋಹಿನೂರನಲ್ಲಿ ತಲಾ 1 ಕೇಸ್‌ನಂತೆ ಒಟ್ಟು 29 ಪ್ರಕರಣಗಳು ವರದಿಯಾಗಿವೆ. ಹುಮನಾಬಾದ ಪಟ್ಟಣದ ಜನತಾ ನಗರದ 3, ತಾಲೂಕಿನ ಬೆನಚಿಂಚೋಳಿ 2, ಧುಮ್ಮನಸೂರ, ಸಿಂದಬಂದಗಿ, ಜಾಮನಗರದಲ್ಲಿ ತಲಾ 1 ಕೇಸ್‌ ಸೇರಿ 8 ಸೋಂಕಿತರು, ಕಮಲನಗರ ಪಟ್ಟಣದ 2, ತಾಲೂಕಿನ ಕೋಟಗ್ಯಾಳ, ಗಣೇಶಪುರ ಮತ್ತು ಬಸನಾಳ ಗ್ರಾಮದಲ್ಲಿ ತಲಾ 1 ಸೇರಿ ಒಟ್ಟು 5 ಪ್ರಕರಣಗಳು ಪತ್ತೆಯಾಗಿವೆ.

ಭಾಲ್ಕಿ ತಾಲೂಕಿನ ಕೇರೂರ 2, ಮಳಚಾಪುರದಲ್ಲಿ 1 ಸೇರಿ 3 ಕೇಸ್‌ ಹಾಗೂ ಚಿಟಗುಪ್ಪ ಪಟ್ಟಣದಲ್ಲಿ 3 ಪಾಸಿಟಿವ್‌ ಕಂಡು ಬಂದಿವೆ. ಹೊಸದಾಗಿ ಪತ್ತೆಯಾಗಿರುವ ಸೋಂಕಿತರಲ್ಲಿ 9 ಜನ ಮಕ್ಕಳು ಸೇರಿದ್ದಾರೆ. 31 ಜನ ಪುರುಷರಿದ್ದರೆ, 17 ಮಂದಿ ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 270 ಪ್ರಕರಣಗಳು ವರದಿಯಾದಂತೆ ಆಗಿದ್ದು, 97 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನೂ 167 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆಯ ಹೆಲ್ತ್‌ ಬುಲೆಟಿನ್‌ ದೃಢಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next