ನವದೆಹಲಿ:ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಸತ್ ನಲ್ಲಿ ಅಂಗೀಕರಿಸಿದ್ದ ಮೂರು ನೂತನ ಕೃಷಿ ಕಾಯ್ದೆಯನ್ನು ಮಹಾರಾಷ್ಟ್ರದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ನಾನಾ ಪಟೋಲೆ ಮಂಗಳವಾರ(ಜನವರಿ 26, 2021) ಮುಂಬೈನ ಆಜಾದ್ ಮೈದಾನದಲ್ಲಿ ಟ್ರ್ಯಾಕ್ಟರ್ ರಾಲಿ ಮೂಲಕ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಭರವಸೆ ನೀಡಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ಇಂದು ನಡೆಸುತ್ತಿರುವ ಟ್ರ್ಯಾಕ್ಟರ್ ರಾಲಿಯನ್ನು ಬೆಂಬಲಿಸಿ ನಾಸಿಕ್ ಜಿಲ್ಲೆಯ ನೂರಾರು ರೈತರು ಕಳೆದ ಎರಡು ದಿನಗಳಿಂದ ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
72ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಗಣ್ಯರನ್ನು ಉದ್ದೇಶಿಸಿ ಸ್ಪೀಕರ್ ಪಟೋಲೆ ಮಾತನಾಡಿದರು. ಮೂರು ಕಾಯ್ದೆಗಳ ಬಗ್ಗೆ ಪರಿಶೀಲಿಸಲು ಮಹಾರಾಷ್ಟ್ರ ಸರ್ಕಾರ ಸಮಿತಿಯನ್ನು ರಚಿಸಲಿದೆ ಎಂದ ಸ್ಪೀಕರ್ ಪಟೋಲೆ, ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದರು.
ನಾನು ಮೊದಲಿಗೆ ರೈತ, ನಂತರ ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ವ್ಯಕ್ತಿಯಾಗಿದ್ದೇನೆ. ಆ ನೆಲೆಯಲ್ಲಿ ನಾನು ರೈತರ ಪ್ರತಿಭಟನೆಗೆ ಬೆಂಬಲ ನೀಡಲು ಇಲ್ಲಿಗೆ ಆಗಮಿಸಿದ್ದೇನೆ ಎಂದರು.
ಸೋಮವಾರ(ಜನವರಿ 25) ಆಜಾದ್ ಮೈದಾನದಲ್ಲಿ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಎನ್ ಸಿಪಿ ವರಿಷ್ಠ ಶರದ್ ಪವಾರ್ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ರೈತರ ಮನವಿ ಸ್ವೀಕರಿಸುವ ಬಗ್ಗೆ ಸಮಯ ನೀಡುತ್ತಿಲ್ಲ ಎಂದು ಆರೋಪಿಸಿದರು.