ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರ ಪಡೆಯುವ ಕಸರತ್ತು ಇನ್ನೂ ಅಂತ್ಯವಾಗಿಲ್ಲ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಸಾಧಿಸಿದ ಮಹಾಯುತಿ ಮೈತ್ರಿಕೂಟವು ಅಧಿಕಾರ ರಚನೆಗೆ ಮುಂದಾಗಿದೆ. ಮಹಾಯುತಿಯ ಪಕ್ಷಗಳಾದ ಬಿಜೆಪಿ, ಶಿಂಧೆ ಬಣದ ಶಿವಸೇನೆ, ಅಜಿತ್ ಬಣದ ಎನ್‌ಸಿಪಿಯ ನಡುವೆ ಇದೀಗ ಮುಖ್ಯಮಂತ್ರಿ ಹುದ್ದೆ ಜಟಾಪಟಿ ಆರಂಭವಾಗಿದೆ.
ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ಶುಕ್ರವಾರ (ನ.29) ಅನಿರೀಕ್ಷಿತವಾಗಿ ಸತಾರಾ ಜಿಲ್ಲೆಯ ತಮ್ಮ ಗ್ರಾಮಕ್ಕೆ ತೆರಳಿದ್ದು, ನಡೆಯಬೇಕಿದ್ದ ಮಹಾಯುತಿ ಮೈತ್ರಿಕೂಟದ ನಿರ್ಣಾಯಕ ಸಭೆಯನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಹೊಸ ಮಹಾರಾಷ್ಟ್ರ ಸರ್ಕಾರದ ರಚನೆಯು ಅನಿಶ್ಚಿತತೆಯಲ್ಲಿದೆ.
ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ಶಿಂಧೆ ಅವರು ಶುಕ್ರವಾರ ಬೆಳಿಗ್ಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗಿನ ಸಭೆ ಬಳಿಕ ಮುಂಬೈಗೆ ಮರಳಿದರು. ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟದ ಭರ್ಜರಿ ಜಯದ ನಂತರ ಅವರ ಮಾತುಕತೆಗಳು ಅಧಿಕಾರ ಹಂಚಿಕೆ ಒಪ್ಪಂದದ ಮೇಲೆ ಕೇಂದ್ರೀಕೃತವಾಗಿವೆ.
ದೆಹಲಿಯಿಂದ ಬಂದ ಬಳಿಕ ಎಲ್ಲವೂ ಸರಿಯಾಗಿದೆ ಎನ್ನುವಂತಹ ಪರಿಸ್ಥಿತಿಯಲ್ಲಿ ದಿಢೀರ್ ಆಗಿ ಶಿಂಧೆ ಸ್ವಗ್ರಾಮಕ್ಕೆ ತೆರಳಿರುವುದು ಅನುಮಾನಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ನಿರ್ಧಾರ ಮತ್ತಷ್ಟು ಮುಂದೂಡಿಕೆಯಾಗುವ ಸಾಧ್ಯೆತೆಯಿದೆ.
ಶಿಂಧೆ ಅವರು ಶನಿವಾರ ಮುಂಬೈಗೆ ಮರಳಲಿದ್ದಾರೆ ಎಂದು ವರದಿ ಹೇಳಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 132 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅದರ ಮಹಾಯುತಿ ಮಿತ್ರರಾದ ಶಿಂಧೆ ಶಿವಸೇನೆ 57 ಕ್ಷೇತ್ರ, ಅಜಿತ್ ಎನ್ ಸಿಪಿ 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.