ಔರಂಗಾಬಾದ್: ಹಿಂಸೆ ಕೊಡುವ ಗಂಡಂದಿರ ವಿರುದ್ಧ ಪತ್ನಿಯರು ಪ್ರತಿಭಟನೆ ನಡೆಸುವುದು ಮಾಮೂಲಿ ವಿದ್ಯಮಾನ.
ಆದರೆ ಅರಳಿ ಮರಕ್ಕೆ 108 ಅಪ್ರದಕ್ಷಿಣೆ ಹಾಕಿ, ಇಂತಹ ಪತ್ನಿಯನ್ನು ಮತ್ತೆ ಕೊಡಬೇಡ ಎಂದು ಗಂಡಂದಿರು ಭಗವಂತನಿಗೆ ಪ್ರಾರ್ಥಿಸಿ, ಪ್ರತಿಭಟನೆ ನಡೆಸಿದ್ದನ್ನು ಕೇಳಿದ್ದೀರಾ? ಕೇಳಿರಲು ಸಾಧ್ಯವಿಲ್ಲ.
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಇಂಥ ಘಟನೆ ನಡೆದಿದೆ. ಅಲ್ಲಿ ವರ್ಷಗಳ ಹಿಂದೆಯೇ ಒಂದಷ್ಟು ಪುರುಷರು “ಪತ್ನಿ ಪೀಡಿತ್ ಆಶ್ರಮ’ವನ್ನು ಕೆಲವು ವರ್ಷಗಳ ಹಿಂದೆಯೇ ಸ್ಥಾಪಿಸಿದ್ದಾರೆ.ಈ ಆಶ್ರಮದ ಸದಸ್ಯರು ಮಹಿಳೆಯರು ತಮ್ಮ ಪರವಾದ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ದೂರಿದ್ದಾರೆ.
ಈ ಬಗ್ಗೆ ಮಾತನಾಡಿದ ಪತ್ನಿ ಪೀಡಿತ್ ಆಶ್ರಮದ ಸ್ಥಾಪಕ ಭರತ್ ಫುಲಾರೆ, ವಟ ಪೌರ್ಣಿಮೆಯಂದು ಪತ್ನಿಯರು, ಮುಂದಿನ 7 ಜನ್ಮಗಳಲ್ಲೂ ತಮಗೆ ಇದೇ ಪತಿ ಸಿಗಲಿ ಎಂದು ಆಲದ ಮರಕ್ಕೆ 108 ಪ್ರದಕ್ಷಿಣೆ ಹಾಕುತ್ತಾರೆ. ನಾವು ಹುಣ್ಣಿಮೆಯ ಹಿಂದಿನ ದಿನ ಅರಳೀ ಮರಕ್ಕೆ 108 ಅಪ್ರದಕ್ಷಿಣೆ ಹಾಕಿ, ಮರವನ್ನು ಪೂಜಿಸಿ, ಇಂತಹ ಪತ್ನಿಯರು ಮುಂದಿನ ಜನ್ಮದಲ್ಲಿ ಸಿಗದಿರಲಿ ಎಂದು ಪ್ರಾರ್ಥಿಸಿದ್ದೇವೆ ಎಂದಿದ್ದಾರೆ.
ಪುರುಷರ ಪರವಾಗಿಯೂ ಕಾನೂನುಗಳು ರಚನೆಯಾಗಬೇಕು, ಆಗ ತಮಗೆ ತಮ್ಮ ದುಃಖ ವನ್ನು ತೋಡಿಕೊಳ್ಳಲು ಸಾಧ್ಯ ಎಂದು ಆಗ್ರಹಿಸಿದ್ದಾರೆ.