Advertisement

Maharashtra-Karnataka Border Dispute; ಮಹಾ ವಿಮೆ ಕ್ಯಾತೆಗೆ ಕರ್ನಾಟಕದ “ವಾರ್ನಿಂಗ್‌’

11:52 PM Apr 05, 2023 | Team Udayavani |

ಬೆಂಗಳೂರು: ರಾಜ್ಯದ ಗಡಿಯೊಳಗಿನ 865 ಗ್ರಾಮಗಳಿಗೆ ಆರೋಗ್ಯ ವಿಮೆ ಜಾರಿ ಮಾಡುವ ಮಹಾರಾಷ್ಟ್ರದ ರಾಜಕೀಯ ಔದಾರ್ಯತೆಗೆ ಕರ್ನಾಟಕ ಕೆಂಡ ಕಾರಿದ್ದು, ಈ ಮಹಾ ಉದ್ಧಟತನಕ್ಕೆ ಕಟು ಎಚ್ಚರಿಕೆಯನ್ನೂ ನೀಡಿದೆ.

Advertisement

ಮಹಾರಾಷ್ಟ್ರ ಸರಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕರ್ನಾಟಕದ ತಂಟೆಗೆ ಬರುವುದು ಬೇಡ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆಯವರಿಗೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇದ್ದರೂ ಮಹಾರಾಷ್ಟ್ರ ಸರಕಾರ ಎರಡೂ ರಾಜ್ಯಗಳ ಗಡಿ ಭಾಗದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಸರಕಾರ ಇದೇ ರೀತಿ ಉದ್ಧಟತನ ಮುಂದುವರಿಸಿದರೆ ಕರ್ನಾಟಕ ಸರಕಾರವೂ ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡಿಗರ ರಕ್ಷಣೆಗೆ ಇದೇ ರೀತಿಯ ವಿಮೆ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದೆಡೆ, ಕನ್ನಡಿಗರ ತೀವ್ರ ವಿರೋಧದ ಹೊರತಾಗಿಯೂ ರಾಜ್ಯದ ಗಡಿಯೊಳಗಿರುವ 865 ಹಳ್ಳಿಗಳಿಗೆ ವಿಮೆ ಜಾರಿ ಮಾಡಿರುವ ಮಹಾರಾಷ್ಟ್ರ ಸರಕಾರದ ಕ್ರಮವನ್ನು ಸಹಿಸಲು ಸಾಧ್ಯವೇ ಇಲ್ಲ. ಈ ಆದೇಶವನ್ನು ತತ್‌ಕ್ಷಣ ವಾಪಸ್‌ ಪಡೆಯದೆ ಇದ್ದರೆ ಪರಿಣಾಮ ನೆಟ್ಟಗಿರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಖಡಕ್‌ ಆಗಿ ಹೇಳಿದ್ದಾರೆ.

ಪ್ರತಿಯೊಂದು ವಿಷಯದಲ್ಲೂ ಮಹಾರಾಷ್ಟ್ರವು ಕರ್ನಾಟಕವನ್ನು ಕೆರಳಿಸುತ್ತದೆ. ರಾಜ್ಯದ ಗಡಿ ಒಳಗಿರುವ 865 ಗ್ರಾಮಗಳ ಜನರಿಗೆ ಆರೋಗ್ಯ ವಿಮೆ ಜಾರಿ ಮಾಡಿದ ಆ ರಾಜ್ಯ ಸರ್ಕಾರದ ನಡೆ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ನೇರ, ಧೂರ್ತ ಪ್ರಯತ್ನ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮಹಾರಾಷ್ಟ್ರ ಒಕ್ಕೂಟ ವ್ಯವಸ್ಥೆಯನ್ನು ಮೀರಿ ಅಹಂಕಾರದಿಂದ ವರ್ತಿಸುತ್ತಿದೆ. ಕೇಂದ್ರದ ಬಿಜೆಪಿ ಸರಕಾರ ಶಿಂಧೆ ಸೂತ್ರದ ರಾಜಕಾರಣಕ್ಕೆ ಕರ್ನಾಟಕವನ್ನು ಬಲಿ ಕೊಡಲು ಹೊರಟಿದೆಯಾ? ಎನ್ನುವ ಅನುಮಾನ ನನ್ನದು. ಇಲ್ಲವಾದರೆ, ಮಹಾರಾಷ್ಟ್ರ ಈ ಪರಿಯ ಉದ್ಧಟತನ ತೋರುತ್ತಿದ್ದರೂ ಮೋದಿ ಸರಕಾರದ ಮೌನವೇಕೆ? ಎಂದು ಪ್ರಶ್ನಿಸಿದ್ದಾರೆ.

Advertisement

ಮಹಾರಾಷ್ಟ್ರ ಸರಕಾರದ ವಜಾಕ್ಕೆ ಆಗ್ರಹ
ಬೆಂಗಳೂರು: ರಾಜ್ಯದ ಗಡಿ ಗ್ರಾಮಗಳಿಗೆ ಮಹಾರಾಷ್ಟ್ರ ಸರಕಾರ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಿರುವ ಕ್ರಮಕ್ಕೆ ನಾಡಿನ ಹಿರಿಯ ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಪ್ರೊ| ಎಸ್‌.ಜಿ. ಸಿದ್ದರಾಮಯ್ಯ, ಕಸಾಪ ಅಧ್ಯಕ್ಷ ಮಹೇಶ ಜೋಶಿ, ಮಹಾರಾಷ್ಟ್ರ ಸರಕಾರದ ಕಾರ್ಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಮಹಾರಾಷ್ಟ್ರ ಸರಕಾರದ ವಜಾಕ್ಕೆ ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರ ಸರಕಾರ ಈ ನಡೆ ಅತಿಕ್ರಮ ಪ್ರವೇಶದಂತಿದೆ. ಕರ್ನಾಟಕದಲ್ಲಿರುವ ಮರಾಠಿ ಗರಿಗೆ ಶೈಕ್ಷಣಿಕವಾಗಿ ಇಲ್ಲವೇ ಸಾಂಸ್ಕೃತಿಕವಾಗಿ ಸಹಾಯ ಮಾಡುವುದಿದ್ದರೆ ಅದನ್ನು ನಾವು ಒಪ್ಪಬಹುದು. ಆದರೆ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಕರ್ನಾಟಕದ ಒಳಗೆ ಅನುಷ್ಠಾನಕ್ಕೆ ಮಾಡಲು ಹೊರಟಿರುವುದು ನಾವು ಒಪ್ಪಿರುವ ಒಕ್ಕೂಟ ವ್ಯವಸ್ಥೆಗೆ ತಕ್ಕುದಲ್ಲ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಹಿತಿ ಪ್ರೊ| ಎಸ್‌.ಜಿ. ಸಿದ್ದರಾಮಯ್ಯ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುವ ರೀತಿಯಲ್ಲಿ ಮಹಾರಾಷ್ಟ್ರ ನಡೆದುಕೊಳ್ಳುತ್ತಿದೆ ಎಂದು ದೂರಿದ್ದಾರೆ. ಕಸಾಪ ಅಧ್ಯಕ್ಷ ಮಹೇಶ ಜೋಶಿ, ಮಹಾ ಸರಕಾರದ ಉದ್ದೇಶ ಸರಿಯಿಲ್ಲ. ಕನ್ನಡಿ ಗರು ಇದನ್ನು ಒಪ್ಪುದಿಲ್ಲ ಎಂದಿದ್ದಾರೆ. ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌, ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್‌ ಶಾ ಮಧ್ಯ ಪ್ರವೇಶ ಮಾಡಿ ಮಹಾರಾಷ್ಟ್ರ ಸರಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಮಾತನಾಡಿ, ನಮ್ಮ ಸರಕಾರ ಕಣ್ಮುಚ್ಚಿ ಕುಳಿತಿದೆ. ಆದರೆ ಮಹಾ ಸರಕಾರ ನಮ್ಮ ರಾಜ್ಯದಲ್ಲಿ ಆರೋಗ್ಯ ಸೇವೆ ಮಾಡುವ ಮೂಲಕ ಒತ್ತುವರಿ ಮಾಡುವ ಕೆಲಸ ಮಾಡುತ್ತಿದೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next