ಮುಂಬೈ: ಮುಂಬೈನಲ್ಲಿ ಜಾಗತಿಕ ಗುಣಮಟ್ಟದ ಅಕ್ವೇರಿಯಂ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.
“ಮುಂಬೈನಲ್ಲಿ ವಿಶ್ವದರ್ಜೆಯ ಅಕ್ವೇರಿಯಂ ನಿರ್ಮಿಸುವ ನಿಟ್ಟಿನಲ್ಲಿ ಕೆಲಸಗಳು ಪ್ರಗತಿಯಲ್ಲಿವೆ. ಇದು ದುಬೈನಲ್ಲಿರುವ ಐದನೇ ಪೀಳಿಗೆಯ ಅಕ್ವೇರಿಯಂಗಿಂತಲೂ ಹೆಚ್ಚು ಅತ್ಯಾಧುನಿಕವಾಗಿರಲಿದೆ,’ ಎಂದು ಮೀನುಗಾರಿಕೆ ಸಚಿವ ಸುಧೀರ್ ಮುಂಗಂತಿವಾರ್ ತಿಳಿಸಿದರು.
“ಅಕ್ವೇರಿಯಂಗಾಗಿ 5-6 ಎಕರೆ ಸ್ಥಳದ ಅವಶ್ಯಕತೆ ಇದೆ. ಮುಂಬೈನಲ್ಲಿ ಒಂದೇ ಕಡೆ ಇಷ್ಟು ದೊಡ್ಡ ಸ್ಥಳ ಸಿಗುವುದೇ ಕಷ್ಟ. ವರ್ಲಿ ಡೇರಿ, ಮುಂಬೈ ಬಂದರು ಟ್ರಸ್ಟ್‌ಗೆ ಸೇರಿದ ಸ್ಥಳ ಸೇರಿದಂತೆ ಇತರೆಡೆ ಜಾಗದ ಹುಡುಕಾಟ ನಡೆಯುತ್ತಿದೆ,’ ಎಂದು ಮಾಹಿತಿ ನೀಡಿದರು.
ಈಗಾಗಲೇ ಮುಂಬೈನ ಮರೈನ್ ಡ್ರೈವ್‌ನಲ್ಲಿ ತಾರಾಪೊರೆವಾಲಾ ಅಕ್ವೇರಿಯಂ ಇದೆ. ಇದನ್ನು 1951ರಲ್ಲಿ ನಿರ್ಮಿಸಲಾಗಿದ್ದು, ದೇಶದ ಹಳೆಯ ಅಕ್ವೇರಿಯಂಗಳಲ್ಲಿ ಒಂದಾಗಿದೆ. ಕೊರೊನಾ ಸಮಯದಲ್ಲಿ ಇದನ್ನು ಮುಚ್ಚಲಾಗಿದ್ದು, ಪುನರ್ ನವೀಕರಣ ಕಾರ್ಯ ನಡೆಯುತ್ತಿದೆ. ನೂತನ ಯೋಜನೆಗೆ ಹೋಲಿಸಿದರೆ ಈ ಅಕ್ವೇರಿಯಂ ಚಿಕ್ಕದು.