Advertisement

ಮಹಾ ಅಘಾಡಿಗೆ 15:13:13 ಸೂತ್ರ: ಇಂದು ಸಂಜೆ ಸಿಎಂ ಆಗಿ ಉದ್ಧವ್‌ ಠಾಕ್ರೆ ಪ್ರಮಾಣ

09:55 AM Nov 29, 2019 | mahesh |

ಮುಂಬಯಿ: ಐದು ದಿನಗಳಲ್ಲಿ ಮಹಾ ನಾಟಕಗಳನ್ನು ಕಂಡಿರುವ ಮಹಾರಾಷ್ಟ್ರದಲ್ಲಿ ಕೊನೆಗೂ ಅಧಿಕಾರಕ್ಕೇರಲಿರುವ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ನ “ಮಹಾ ವಿಕಾಸ್‌ ಅಘಾಡಿ’ ಮೈತ್ರಿಕೂಟ ಈಗ ನಿರಾಳವಾಗಿದ್ದು, ಅಧಿಕಾರ ಹಂಚಿಕೆಯತ್ತ ಗಮನ ನೆಟ್ಟಿದೆ.

Advertisement

ಶಿವಸೇನೆ ವರಿಷ್ಠ ಉದ್ಧವ್‌ ಠಾಕ್ರೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿ ಸುವ ಮುನ್ನಾ ದಿನವಾದ ಬುಧವಾರವೇ ಮೂರೂ ಪಕ್ಷಗಳ ನಾಯಕರು ಸಭೆ ಸೇರಿ ಅಧಿಕಾರ ಹಂಚಿಕೆ ಕುರಿತು ಸಮಾಲೋಚನೆ ನಡೆಸಿದ್ದಾರೆ. ಶಿವಸೇನೆಗೆ ಸಿಎಂ+15, ಎನ್‌ಸಿಪಿಗೆ ಡಿಸಿಎಂ+13 ಮತ್ತು ಕಾಂಗ್ರೆಸ್‌ಗೆ ಸ್ಪೀಕರ್‌+13 ಸೂತ್ರದಲ್ಲಿ ಅಧಿಕಾರ ಹಂಚಿಕೆಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅದರಂತೆ ಉದ್ಧವ್‌ ಠಾಕ್ರೆ ನೇತೃತ್ವದ ಸಚಿವ ಸಂಪುಟದಲ್ಲಿ ಶಿವಸೇನೆ 15 ಸಚಿವರನ್ನು ಹೊಂದಿರಲಿದ್ದು, ಡಿಸಿಎಂ ಹುದ್ದೆಯನ್ನು ಎನ್‌ಸಿಪಿಗೆ ಬಿಟ್ಟುಕೊಡಲಾಗಿದೆ. ಇದರ ಜತೆಗೆ, ಎನ್‌ಸಿಪಿ 13 ಸಚಿವ ಸ್ಥಾನಗಳನ್ನೂ ಪಡೆಯಲಿದೆ. ಮೂರನೇ ಪಕ್ಷವಾಗಿರುವ ಕಾಂಗ್ರೆಸ್‌ ಸ್ಪೀಕರ್‌ ಹುದ್ದೆಯನ್ನು ತನ್ನ ದಾಗಿಸಿ ಕೊಳ್ಳುವುದರ ಜತೆಗೆ 13 ಸಚಿವ ಸ್ಥಾನ ಗಳನ್ನೂ ಗಳಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸರಕಾರ ರಚನೆಗೆ ಹಕ್ಕು ಮಂಡಿಸಿದ ಬಳಿಕ ಬುಧವಾರ ಮೂರೂ ಪಕ್ಷಗಳ ನಾಯಕರು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಅಹ್ಮದ್‌ ಪಟೇಲ್‌, ಕೆ.ಸಿ. ವೇಣುಗೋಪಾಲ್‌ ಸಹಿತ ಕಾಂಗ್ರೆಸ್‌ ಹಿರಿಯ ನಾಯಕರು, ಶಿವ ಸೇನೆಯಿಂದ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಭಾಗ ವಹಿಸಿದ್ದರು. ಪವಾರ್‌ ನಿವಾಸದಲ್ಲೂ ಒಂದು ಸುತ್ತಿನ ಸಭೆ ನಡೆದಿತ್ತು. ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಬಾಳಾ ಸಾಹೇಬ್‌ ಥೋರಟ್‌, ಎರಡು ದಿನಗಳಲ್ಲಿ ಸಚಿವ ಸ್ಥಾನಗಳ ಹಂಚಿಕೆ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದಿದ್ದರು.

ಯಾರ್ಯಾರು ಭಾಗಿ?
ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಕಾಂಗ್ರೆಸ್‌ ಅಧಿಕಾರ ದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಡಿಎಂಕೆ ನಾಯಕ ಸ್ಟಾಲಿನ್‌, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ರನ್ನು ಆಹ್ವಾನಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕ ವಿಜಯ್‌ ವಡೆಟ್ಟಿವಾರ್‌ ಹೇಳಿದ್ದಾರೆ. ಸಮಾರಂಭದಲ್ಲಿ ಭಾಗವಹಿಸುವಂತೆ ರಾಜ್ಯಾದ್ಯಂತದ 400 ರೈತರಿಗೆ ಆಹ್ವಾನ ನೀಡಲಾಗಿದೆ ಎಂದು ಶಿವಸೇನೆ ನಾಯಕ ವಿನಾಯಕ ರಾವುತ್‌ ತಿಳಿಸಿದ್ದಾರೆ.

Advertisement

ಇಂದು ಸಂಜೆಯಿಂದ ಉದ್ಧವ್‌ಗಿರಿ
ಮಹಾರಾಷ್ಟ್ರದ 17ನೇ ಮುಖ್ಯಮಂತ್ರಿಯಾಗಿ ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಗುರುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಸಿಎಂ ಹುದ್ದೆಗೇರಿದ ಬಾಳಾ ಠಾಕ್ರೆ ಕುಟುಂಬದ ಮೊದಲ ಕುಡಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಮಧ್ಯ ಮುಂಬಯಿಯ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ಸಂಜೆ 6.40ಕ್ಕೆ ಅದ್ದೂರಿ ಪದಗ್ರಹಣ ಸಮಾರಂಭ ನಡೆಯಲಿದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿವಾಜಿ ಪಾರ್ಕ್‌ಗೂ ಶಿವಸೇನೆಗೂ ಅವಿನಾಭಾವ ಸಂಬಂಧವಿದ್ದು, ಪಕ್ಷದ ಸ್ಥಾಪಕ ಬಾಳಾ ಠಾಕ್ರೆ ಇದೇ ಸ್ಥಳದಲ್ಲಿ ವಾರ್ಷಿಕ ದಸರಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದರು. ಅಲ್ಲದೆ ಇಲ್ಲೇ ಬಾಳಾ ಠಾಕ್ರೆ ಅವರ ಸಮಾಧಿಯಿದೆ. ಈ ಎಲ್ಲ ಕಾರಣಗಳಿಂದಾಗಿ ಉದ್ಧವ್‌ ತನ್ನ ಪ್ರಮಾಣವಚನ ಸ್ವೀಕಾರಕ್ಕೆ ಶಿವಾಜಿ ಪಾರ್ಕನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಅಜಿತ್‌ಗೆ ಮತ್ತೆ ಡಿಸಿಎಂ ಹುದ್ದೆ?
ಎನ್‌ಸಿಪಿಯಿಂದ ಬಂಡಾಯವೆದ್ದು ಗುಟ್ಟಾಗಿ ಬಿಜೆಪಿ ಜತೆ ಕೈಜೋಡಿಸಿ ಡಿಸಿಎಂ ಹುದ್ದೆ ಅಲಂಕರಿಸಿದ್ದ ಅಜಿತ್‌ ಪವಾರ್‌ ಈಗ ಗೂಡಿಗೆ ಮರಳಿದ್ದಾರೆ. ಹೀಗಾಗಿ ಅವರಿಗೆ ಮತ್ತೂಮ್ಮೆ ಅದೇ ಹುದ್ದೆ ಸಿಗಲಿದೆಯೇ ಎಂಬ ಗುಸುಗುಸು ಆರಂಭವಾಗಿದೆ. ಅವರಿಗೆ ಪ್ರಮುಖ ಸ್ಥಾನಮಾನ ನೀಡಬೇಕು ಎಂದು ವರಿಷ್ಠ ಶರದ್‌ ಪವಾರ್‌ ಅವರನ್ನು ಎನ್‌ಸಿಪಿ ಶಾಸಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಸರಕಾರದಲ್ಲಿ ನಮ್ಮ ಕೆಲಸಗಳು ಆಗಬೇಕಾದರೆ ಅಜಿತ್‌ ಅವರ ಅಗತ್ಯ ಇದೆ ಎಂದು ಶೇ.90ರಷ್ಟು ಶಾಸಕರು ಕೇಳಿಕೊಂಡಿದ್ದಾರೆ. ಈ ಕುರಿತು ಶರದ್‌ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೂ ಅಜಿತ್‌ಗೆ ನೂತನ ಸರಕಾರದಲ್ಲೂ ಡಿಸಿಎಂ ಹುದ್ದೆ ಸಿಗುವ ಸಾಧ್ಯತೆ ಅಧಿಕವಾಗಿದೆ.

ಅಧಿಕಾರ ಲಾಲಸೆಯ ಮೈತ್ರಿ: ಅಮಿತ್‌ ಶಾ
ನಾವು ಶಿವಸೇನೆಗೆ ಸಿಎಂ ಹುದ್ದೆಯ ಆಫ‌ರ್‌ ನೀಡಿಯೇ ಇರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುನರುಚ್ಚರಿಸಿದ್ದಾರೆ. ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಅವರು, ಈ ಕುರಿತು ನಾನು ಮತ್ತೂಮ್ಮೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಚುನಾವಣ ರ್ಯಾಲಿಗಳು ನಡೆಯುತ್ತಿದ್ದಾಗ, ಉದ್ಧವ್‌ ಮತ್ತು ಆದಿತ್ಯ ಠಾಕ್ರೆ ವೇದಿಕೆಯಲ್ಲಿದ್ದಾಗ, ಅವರ ಸಮ್ಮುಖದಲ್ಲೇ ನಾವು ದೇವೇಂದ್ರ ಫ‌ಡ್ನವೀಸ್‌ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದೆವು. ಆಗ ಅವರು ವಿರೋಧಿಸಲಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಇಂಥ ಮತಬ್ಯಾಂಕ್‌ ರಾಜಕೀಯಕ್ಕೆ ದೇಶದ ಜನರು ಮರುಳಾಗುವುದಿಲ್ಲ ಮತ್ತು ಅವರು ಈಗಲೂ ಬಿಜೆಪಿ ಜತೆಗೇ ಇದ್ದಾರೆ ಎಂದು ನಾನು ಹೇಳಲಿಚ್ಛಿಸುತ್ತೇನೆ ಎಂದೂ ಶಾ ಹೇಳಿದ್ದಾರೆ.

285 ಶಾಸಕರ ಪ್ರಮಾಣವಚನ
ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಬುಧವಾರ ನಡೆದಿದ್ದು, 285 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿಯ ಸುಧೀರ್‌ ಮುಂಗಂತಿವಾರ್‌ ಮತ್ತು ಸ್ವಾಭಿಮಾನಿ ಪಕ್ಷದ ದೇವೇಂದ್ರ ಭುಯಾರ್‌ ಗೈರಾಗಿದ್ದರು. ಹಂಗಾಮಿ ಸ್ಪೀಕರ್‌ ಕಾಳಿದಾಸ ಕೊಳಂಬರ್‌ ಮಂಗಳವಾರವೇ ಪ್ರಮಾಣ ಸ್ವೀಕರಿಸಿದ್ದರು. ಅಜಿತ್‌ ಪವಾರ್‌ ಪ್ರಮಾಣವಚನ ಸ್ವೀಕರಿಸಲು ಬರುತ್ತಿದ್ದಂತೆಯೇ ಎನ್‌ಸಿಪಿಯ ಇತರ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು. ಆದಿತ್ಯ ಠಾಕ್ರೆ ಅವರ ಪ್ರಮಾಣದ ಸಂದರ್ಭದಲ್ಲೂ ಕರತಾಡನ ಕೇಳಿಬಂತು.

Advertisement

Udayavani is now on Telegram. Click here to join our channel and stay updated with the latest news.

Next